ಕಾಪು : ಕಟಪಾಡಿ ಏಣಗುಡ್ಡೆ ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಸಂಪನ್ನ
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕಾಪು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಾಮ ಸಮಿತಿ ರಚಿಸಿ, ಪ್ರತಿ ಮನೆಗೂ ಮನವಿ ಪತ್ರ ತಲುಪಿಸಿ ಅಮ್ಮನ ಅಭಯ ವಾಕ್ಯದಂತೆ ದೇವಳ ನಿರ್ಮಾಣದ ವಿಷಯ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಆಶಯ ಅದರಂತೆ ನಿನ್ನೆ ಏಣಗುಡ್ಡೆ ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗ್ರಾಮದ ಹಿರಿಯರಾದ ವೈ. ಭರತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಶಿಲ್ಪಾ ಜಿ. ಸುವರ್ಣ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳನ್ನು ಸ್ವಾಗತಿಸಿ, ಗುರುತಿಸಿದರು.
ಒಂಬತ್ತು ಜನ ಸುಮಂಗಲಿಯರಾದ ವಸಂತಿ ಜಗನ್ನಾಥ್ ಕೋಟೆ, ಜಯಂತಿ ಇಂದುಶೇಖರ್, ಸುನಂದಾ ಎಸ್. ಪೂಜಾರಿ, ಲೀಲಾವತಿ, ಸರೋಜ ಆನಂದ್, ಶೈಲಜಾ ಎಂ. ಹೆಗ್ಡೆ, ಜಯಂತಿ ಶೇರಿಗಾರ್ , ಜಯಶ್ರೀ ಮತ್ತು ಸುಮಿತ್ರ ಇವರು ಏಕಕಾಲದಲ್ಲಿ ದೀಪ ಬೆಳಗಿಸಿ ಅಮ್ಮನ ಸ್ತುತಿಯೊಂದಿಗೆ ಆರತಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ದೇವಳ ನಿರ್ಮಾಣದ ಜೊತೆಗಿರುವ ಯೋಜನೆಗಳನ್ನು ತಿಳಿಸಿದರು, ಶಿಲಾಸೇವೆಯ ಮಹತ್ವ, ಗ್ರಾಮ ಸಮಿತಿಯ ಜವಾಬ್ದಾರಿ ಹಾಗೂ ಇತರ ವಿಷಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು ಗ್ರಾಮ ಸಮಿತಿಯನ್ನು ರಚನೆ ಮಾಡಿ 9 ಜನ ಪುರುಷರ ಒಂದು ತಂಡ ಮತ್ತು 9 ಜನ ಮಹಿಳೆಯರ ಒಂದು ತಂಡವನ್ನು ರಚಿಸಿದರು.
ಶೀಘ್ರವಾಗಿ ಇನ್ನಷ್ಟು ತಂಡಗಳನ್ನು ರಚಿಸಿ ಹೊಸ ಮಾರಿಗುಡಿ ದೇವಳದ ಜೀರ್ಣೋದ್ಧಾರ ವಿಷಯವನ್ನು ಗ್ರಾಮದ ಪ್ರತಿ ಮನೆ ಮನೆಗೂ ಸುದ್ದಿ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಗ್ರಾಮದ ಹಿರಿಯರು ತಿಳಿಸಿರುತ್ತಾರೆ.
ಗ್ರಾಮಸ್ಥರ ಅಭಿಪ್ರಾಯ ಮಂಡನೆಗೆ ಅವಕಾಶವನ್ನು ನೀಡಿ ನಂತರ ಉಪಾಧ್ಯಕ್ಷರಾದ ಮಾಧವ ಆರ್ ಪಾಲನ್ ಮಾತನಾಡಿ ಏಣಗುಡ್ಡೆ ಗ್ರಾಮದ ಪ್ರತಿ ಮನೆಯಿಂದಲೂ ಕನಿಷ್ಠ 9 ಶಿಲಾಸೇವೆಯನ್ನು (ರೂಪಾಯಿ 9,999) ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕೆಂದು ವಿನಂತಿಸಿಕೊಂಡರು.
ಗ್ರಾಮದ ಪ್ರತಿ ಮನೆ ಮನೆಗೆ ತಲುಪಿಸುವ ಮನವಿ ಪತ್ರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಪ್ರಮುಖರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಗ್ರಾಮದ ಪ್ರಮುಖರಾದ ರಂಜನ್ ಹೆಗ್ಡೆ, ಸುಭಾಸ್ ಬಲ್ಲಾಳ್, ಅಶ್ವಿನ್ ಬಲ್ಲಾಳ್ ಕಟಪಾಡಿ ಬೀಡು, ಮಹೇಶ್ ಬಿ. ಶೆಟ್ಟಿ, ಜಗನ್ನಾಥ್ ಕೋಟೆ, ಅಶೋಕ್ ರಾವ್, ಸೂರಪ್ಪ ಪೂಜಾರಿ, ಆನಂದ ಮಾಬೆನ್, ಶ್ರೀಧರ್, ಪದ್ಮನಾಭ ಕೋಟ್ಯಾನ್, ಸಾಧು ಪೂಜಾರಿ, ಹರೀಶ್ ಕಟಪಾಡಿ, ನಾಗೇಶ್, ದೀಪಕ್, ಜಯಕರ ಸೇರಿಗಾರ್ ಮತ್ತು ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.
