ಪಡುಬಿದ್ರಿ : ಶಾಲಾ ವಿವಿಧ ಸಂಘಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ವಿಕಸನಕ್ಕೆ ಉತ್ತಮ ವೇದಿಕೆ - ಬಿ.ಪುಂಡಲೀಕ ಮರಾಠೆ
ಪಡುಬಿದ್ರಿ : ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶಿಷ್ಟ ಶಕ್ತಿಯನ್ನು ಲೋಕಮುಖಕ್ಕೆ ತೋರಿಸಲು ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಬೇಕಾದದ್ದು ಶಿಕ್ಷಣ ಸಂಸ್ಥೆಗಳ ಕರ್ತವ್ಯವೇ ಆಗಿದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ವಿಕಾಸದ ಆಶಯದೊಂದಿಗೆ ಪಡುಬಿದ್ರಿ ಗಣಪತಿ ಪ್ರೌಢ ಶಾಲೆ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ವಿದ್ಯಾರ್ಥಿಗಳು ಸಾಹಿತ್ಯ, ಸಂಗೀತ, ಕ್ರೀಡೆ, ಚಿತ್ರಕಲೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭಾ ಸಂಪನ್ನರಾಗಿ ಜೀವನವನ್ನು ಸಾರ್ಥಕಗೊಳಿಸಿ ಯಶಸ್ಸಿನ ಪಥದಲ್ಲಿ ಸಾಗಬೇಕು. ಶಾಲಾ ವಿವಿಧ ಸಂಘಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಹೇಳಿದರು.
ಅವರು ಶುಕ್ರವಾರ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಪಡುಬಿದ್ರಿ ಮತ್ತು ಶ್ರೀಬ್ರಹ್ಮ ವಿದ್ಯಾಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಪಡುಬಿದ್ರಿ ಇದರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಶಾಲಾ ಪಠ್ಯಪೂರಕ ಚಟುವಟಿಕೆಗಳ ವಿವಿಧ ಸಂಘಟನೆಗಳನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಶ್ರೀಶ ಬಾಯರಿ, ಚಂದ್ರಕಾಂತ್, ವಸಂತಿ, ನಮಿತಾ, ಭಾರತಿ, ಸಂಗೀತಾ, ಸ್ವಾತಿ, ದೀಪಕ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಅನುರಾಧಾ ಪಿ.ಎಸ್.ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕರಾದ ಡಾ.ರಾಘವೇಂದ್ರ ರಾವ್ ಆಶಯನುಡಿಯಲ್ಲಿ ಶಾಲೆಯಲ್ಲಿ ಪ್ರಾರಂಭಿಸಲಾಗುತ್ತಿರುವ ವಿವಿಧ ಸಂಘಗಳು ಮತ್ತು ಹಿನ್ನೆಲೆಯನ್ನು ವಿವರಿಸಿದರು. "ನನ್ನ ಶಾಲೆಯ ಸ್ವಚ್ಛತೆ ನನ್ನ ಕರ್ತವ್ಯ" ಹಿನ್ನೆಲೆಯಲ್ಲಿ ಏರ್ಪಡಿಸಿದ ಚಟುವಟಿಕಾ ಸ್ಫರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಚಿತ್ರಕಲಾ ಶಿಕ್ಷಕ ನರೇಂದ್ರ ಎಚ್.ಎನ್ ಗೌರವಾರ್ಪಣೆ ಮಾಡಿದರು. ವಿಜ್ಞಾನ ಶಿಕ್ಷಕಿ ಅಕ್ಷತಾ ಎಸ್.ನಿರೂಪಿಸಿದರು. ಅನ್ವಿತಾ, ಭೂಮಿಕಾ ಪ್ರಾರ್ಥಿಸಿದರು. ಶಿಕ್ಷಕಿ ಅನಿತಾ ಆಚಾರ್ಯ ವಂದಿಸಿದರು.
