ಪಡುಬಿದ್ರಿ : ತ್ಯಾಜ್ಯ ಸಮಸ್ಯೆ - ಪಡುಬಿದ್ರಿ ಗ್ರಾಪಂ ಎದುರು ಕಾಂಗ್ರೆಸ್ ಪ್ರತಿಭಟನೆ
ಪಡುಬಿದ್ರಿ: ಕಾಂಗ್ರೆಸ್ ಸ್ಥಾನೀಯ ಸಮಿತಿಯು ತನ್ನ ಸ್ಥಳೀಯ ನಾಯಕರು, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರ ಬೆಂಬಲದೊಂದಿಗೆ ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸುವಂತೆ, ಮುಂದೆ ಎಂದೂ ಗ್ರಾ. ಪಂ. ಆವರಣದಲ್ಲಿ ತ್ಯಾಜ್ಯಗಳ ರಾಶಿಯನ್ನು ಪರಿಸರ ಮಾಲಿನ್ಯವಾಗುವ ರೀತಿಯಲ್ಲಿ ಪೇರಿಸಿಡಕೂಡದೆಂಬಂತೆ ಪ್ರತಿಭಟನೆಯನ್ನು ಶುಕ್ರವಾರದಂದು ಹಮ್ಮಿಕೊಂಡಿತ್ತು.
ಪಡುಬಿದ್ರಿ ಗ್ರಾ. ಪಂ. ಆವರಣದಲ್ಲಿನ ತ್ಯಾಜ್ಯ ಮುಕ್ತಿಗಾಗಿ ಕಾಂಗ್ರೆಸ್ ಪ್ರತಿಭಟನೆಯ ಕಾವನ್ನರಿತ ಬಿಜೆಪಿ ಬೆಂಬಲಿತ ಪಡುಬಿದ್ರಿ ಗ್ರಾ. ಪಂ. ಆಡಳಿತವು ಬೆಳ್ಳಂಬೆಳಿಗ್ಗಿನಿಂದಲೇ ಪಂಚಾಯತ್ ಎದುರಿನ ತ್ಯಾಜ್ಯಗಳನ್ನು ತೆರವುಗೊಳಿಸಲು ಮುಂದಾಯಿತು.
ಆಗ ಕಾಂಗ್ರೆಸ್ ನಾಯಕರೂ ಪ್ರತಿಭಟನೆಯನ್ನು ಸೌಮ್ಯಗೊಳಿಸಿ ಮುಂದೆ ಪಡುಬಿದ್ರಿಯ ನಾಗರಿಕರಿಗೆ ಅನ್ಯಾಯವಾಗುವಂತೆ ಕಸದ ರಾಶಿಯನ್ನು ಪಂಚಾಯತ್ ಮುಂದೆ ಹಾಕಕೂಡದು. ಆದರೂ ಅದೇ ಚಾಳಿಯನ್ನು ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್‌ಗೆ ಬೀಗ ಜಡಿದು ಉಗ್ರ ಪ್ರತಿಭಟನೆಯನ್ನು ಮಾಡುವುದಾಗಿ ಮನವಿಯೊಂದನ್ನು ಸ್ಥಳಕ್ಕಾಗಮಿಸಿದ ಕಾಪು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಹಾಗೂ ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಅವರಿಗೆ ಸಲ್ಲಿಸಿದರು.
ಪಡುಬಿದ್ರಿ ಗ್ರಾ. ಪಂ. ತನ್ನ ತ್ಯಾಜ್ಯ ವಿಲೇವಾರಿಗಾಗಿ 15ಲಕ್ಷ ರೂ. ಅಂದಾಜು ಮೌಲ್ಯದ ಸ್ಕ್ರಬ್ಬರ್ ಯಂತ್ರವನ್ನು ಶೀಘ್ರವೇ ಅಳವಡಿಸಿಕೊಳ್ಳಲಿದೆ ಎಂದೂ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಕಾಂಗ್ರೆಸ್ ಧುರೀಣರಿಗೆ ಆಶ್ವಾಸನೆಯನ್ನಿತ್ತರು.
ಪಡುಬಿದ್ರಿ ಗ್ರಾ. ಪಂ. ಧರಣಿಯ ವೇಳೆ ಕೆಪಿಸಿಸಿ ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಡಿಸಿಸಿ ಉಪಾಧ್ಯಕ್ಷ ವೈ. ಸುಕುಮಾರ್, ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೀಝ್ ಹುಸೈನ್, ಮಾಜಿ ತಾ. ಪಂ. ಸದಸ್ಯ ಭಾಸ್ಕರ ಪಡುಬಿದ್ರಿ, ಕಾಂಗ್ರೆಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ, ಮಹಿಳಾ ಘಟಕಾಧ್ಯಕ್ಷೆ ಸುಚರಿತಾ ಅಮೀನ್, ನವೀನ್ ಎನ್. ಶೆಟ್ಟಿ, ಮಾಜಿ ಗ್ರಾ. ಪಂ. ಅಧ್ಯಕ್ಷೆ ಸಂಜೀವಿ ಪೂಜಾರ್ತಿ, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ಜತೆಗಿದ್ದರು.
