ಶಿರ್ವ : ಹಿಂದೂ ಜೂನಿಯರ್ ಕಾಲೇಜು - ವಿದ್ಯಾರ್ಥಿಗಳ ದತ್ತು ಸ್ವೀಕಾರ ; ವಿದ್ಯಾರ್ಥಿ ವೇತನ ಕಾರ್ಯಕ್ರಮ
ಶಿರ್ವ : ಸ್ಥಳೀಯ ಹಿಂದೂ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರಗಿತು.
ಹಿಂದೂ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮಾನಂದ್ ಶೆಟ್ಟಿಗಾರ್ ಇವರು ವಹಿಸಿದ್ದರು. ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀ.ವಿ ಸುಬ್ಬಯ್ಯ ಹೆಗ್ಡೆಯವರು ದೀಪ ಪ್ರಜ್ವಲನ ಮಾಡಿದರು. ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಇನ್ನಾ ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವೂ ಸೇರಿದಂತೆ ಕಾಲೇಜಿನಲ್ಲಿ ನಡೆಯುವ ಕ್ರೀಡಾಕೂಟ, ವಾರ್ಷಿಕೋತ್ಸವ, ನಿರ್ವಹಣಾ ಕೆಲಸಗಳಿಗೆ, ಹೀಗೆ ಒಟ್ಟು ರೂಪಾಯಿ 4 ಲಕ್ಷ ದ ಕೊಡುಗೆಗಳನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಉಪಾನ್ಯಾಸಕರಾದ ವಿಷ್ಣು ಭಟ್ ದಂಪತಿಗಳನ್ನು ಹಾಗೂ ಕಳೆದ ಬಾರಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರಾಂಕನ್ನು ಗಳಿಸಿದ ಕುಮಾರಿ ಅಂಶಿ.ಎಸ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಂಬೈ ಸಮಿತಿಯ ಗೌರವ ಸಲಹೆಗಾರರಾದ ಕುತ್ಯಾರು ಕಿಶೋರ್ ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಸೊರ್ಕಳ, ಉಪಾಧ್ಯಕ್ಷರಾದ ಕೋಡು ಜಯಪ್ರಕಾಶ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಭಾಸ್ಕರ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿ ಹಾಗೂ ಕೋಶಾಧಿಕಾರಿ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೇಂಜ ಪವನ್ ಶೆಟ್ಟಿ ವಂದಿಸಿದರು.
