ಕಾಪು : ಪಾದೂರು - ಪೋಷಣ್ ಅಭಿಯಾನ ಸಪ್ತಾಹ
ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಸಪ್ತಾಹ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾದೂರು ಮಹಿಳಾ ಮಂಡಲದ ಗೌರವ ಅಧ್ಯಕ್ಷರೂ, ಹಿರಿಯ ಸಮಾಜಸೇವಕರಾದ ಜಯಲಕ್ಷ್ಮಿ ಆಳ್ವರವರು ವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಅವರು ಮಹಿಳಾ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯವರು ಕಾಲಕಾಲಕ್ಕೆ ನೀಡುವ ಮಾಹಿತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುಟುಂಬದ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾಪು ಪ್ರಾ.ಆ.ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಯಶೋದಾ ಪೌಷ್ಟಿಕಾಂಶ ಉಳ್ಳ ಆಹಾರ ವಸ್ತುಗಳು, ಅವುಗಳ ಬಳಕೆ, ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪೂರ್ಣಿಮಾ ಆರೋಗ್ಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಾದೂರು ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಸಾದ್ ಆಚಾರ್ಯ, ಸಮುದಾಯ ಆರೋಗ್ಯಾಧಿಕಾರಿ ರಮ್ಯಾ, ಸಮಿತಿಯ ಸದಸ್ಯರಾದ ವಿಶಾಲ, ಆಶಾ ಕಾರ್ಯಕರ್ತೆ ಸರಸ್ವತೀ, ಅಂಗನವಾಡಿ ಸಹಾಯಕಿ ಆಶಾ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ವತ್ಸಲಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು.
