ಅಕ್ಟೋಬರ್ 15 ರಿಂದ 24 : ಉಚ್ಚಿಲ ದಸರಾ - 2023
Thumbnail
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಬಾರಿಯೂ ಉಚ್ಚಿಲ ದಸರಾವು ಅಕ್ಟೋಬರ್ 15 ರಿಂದ 24 ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್ ಹೇಳಿದರು. ಅವರು ಸೋಮವಾರ ಉಚ್ಚಿಲ ಮೊಗವೀರ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಕ್ಟೋಬರ್ 15ರಂದು ಶಾಲಿನಿ ಡಾ| ಜಿ.ಶಂಕರ್ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆಯೊಂದಿಗೆ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಚಾಲನೆ ನೀಡುವರು. ಅಂದು ಮಹಾಲಕ್ಷ್ಮಿ ಅನ್ನಛತ್ರ ಕಟ್ಟಡ, ಅತಿಥಿಗೃಹ ಉದ್ಘಾಟನೆಯೂ ನಡೆಯಲಿದೆ. ಗಣ್ಯರ ಉಪಸ್ಥಿತಿಯಲ್ಲಿ ದೇವಿಗೆ ಭೂತಾಯಿ ಮೀನಿನ ಬಂಗಾರದ ಹಾರದ, ಬೆಳ್ಳಿ ಕಿರೀಟ, ಬೆಳ್ಳಿ ತಂಬೂರಿ ಸಮರ್ಪಣೆ ನಡೆಯಲಿದೆ. ಈ ಬಾರಿ ದಸರಾ ವಿಶೇಷ ಆಕರ್ಷಣೆಯಾಗಿ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಮೀನುಗಾರಿಕೆ ಯೋಜನೆಗಳ ಮಾಹಿತಿ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಶತವೀಣಾವಲ್ಲರಿ, ಧಾರ್ಮಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ನಡೆಯಲಿದೆ. ಶೋಭಾಯಾತ್ರೆಯು ದೇವಳದಿಂದ ಪ್ರಾರಂಭಗೊಂಡು ರಾಷ್ಟ್ರೀಯ ಹೆದ್ದಾರಿಯ ಮೂಲಕ ಎರ್ಮಾಳು ಜನಾರ್ಧನ ದೇವಳದವರೆಗೆ ಸಾಗಿ ಅಲ್ಲಿಂದ ಕೊಪ್ಪಲಂಗಡಿ ಮೂಲಕ ಕಾಪು ದೀಪಸ್ತಂಭದ ಬಳಿ ಸಮುದ್ರ ಕಿನಾರೆಯಲ್ಲಿ ನವದುರ್ಗೆ, ಶಾರದಾ ಮೂರ್ತಿಯ ಜಲಸ್ತಂಭನ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಅಂಬಾರಿ ಹೊತ್ತ ಕೃತಕ ಆನೆ, ಭಜನಾ ತಂಡಗಳು, ಹುಲಿವೇಷ, ವಿವಿಧ ವೇಷಭೂಷಣ ಇರಲಿದೆ. ಸಮುದ್ರ ಕಿನಾರೆಯ ಬಳಿ ಕಾಶಿಯ ಅರ್ಚಕರಿಂದ ಗಂಗಾರತಿ ಬೆಳಗುವ ಕಾರ್ಯವೂ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ , ಜೀಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿ‌ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕು ಪಟ್ಣ ಅಧ್ಯಕ್ಷೆ ಸುಗುಣ ಕರ್ಕೇರ, ಉಪಾಧ್ಯಕ್ಷ ಸುಭಾಶ್ಚಂದ್ರ, ಕಾರ್ಯದರ್ಶಿ ಸುಧಾಕರ್ ಕುಂದರ್, ಅನಿಲ್ ಕುಮಾರ್, ಶಂಕರ್ ಸಾಲ್ಯಾನ್, ದಿನೇಶ್ ಮೂಳೂರು, ದಿನೇಶ್ ಎರ್ಮಾಳು, ಸತೀಶ್ ಬಾರ್ಕೂರು, ಮನೋಜ್ ಕಾಂಚನ್, ರವೀಂದ್ರ ಶ್ರೀಯಾನ್, ಸತೀಶ್ ಅಮೀನ್ ಬಾರ್ಕೂರು, ದೇವಳದ ಮುಖ್ಯ ಪ್ರಬಂಧಕ ಸತೀಶ್ ಅಮೀನ್ ಮಟ್ಟು ಉಪಸ್ಥಿತರಿದ್ದರು.
09 Oct 2023, 06:51 PM
Category: Kaup
Tags: