ಅಕ್ಟೋಬರ್ 15 : ಉಡುಪಿಯಲ್ಲಿ ಮಹಿಷಾ ದಸರಾ ಆಚರಣೆ
ಕಾಪು : ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಯುವ ಸೇನೆಯ ನೇತೃತ್ವದಲ್ಲಿ ಉಡುಪಿಯಲ್ಲಿ ಅಕ್ಟೋಬರ್ 15ರಂದು ಆಚರಿಸಲಿರುವ ಮಹಿಷಾ ದಸರಾ ಆಚರಣೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಸಮಿತಿಯ ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿಯವರು ಬುಧವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾವು ಯಾರ ಆಚರಣೆ ವಿರೋಧಿಸುತ್ತಿಲ್ಲ. ನಾವು ಧರ್ಮ ವಿರೋಧಿಗಳಲ್ಲ. ಯಾರ ಭಾವನೆಗಳಿಗೂ ಧಕ್ಕೆ ತರುವುದಿಲ್ಲ. ಸರಕಾರ ಆದೇಶ ನೀಡಿಲ್ಲ. ಆದರೂ ನಾವು ವಿಚಾರ ಸಂಕೀರ್ಣ ನಿಲ್ಲಿಸುವುದಿಲ್ಲ ಎಂದರು.
ಉಡುಪಿಯಲ್ಲಿ ಅಂಬೇಡ್ಕರ್ ಯುವ ಸೇನೆಯ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು, ಪ್ರಗತಿಪರರು, ಚಿಂತಕರು, ವಿಚಾರವಾದಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಆನಂದ್ ಬ್ರಹ್ಮಾವರ, ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಲೋಕೇಶ್ ಪಡುಬಿದ್ರಿ, ಗೌರವಾಧ್ಯಕ್ಷ ಪಿ ಕೃಷ್ಣ ಬಂಗೇರ ಉಪಸ್ಥಿತರಿದ್ದರು.
