ಕಾಪು : ತಾಲೂಕಿನ 16 ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸಾ ಅಭಿಯಾನ
ಕಾಪು : ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾಪು ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕಾಪು ಇವರುಗಳ ಜಂಟಿ ಆಶ್ರಯದಲ್ಲಿ ಗ್ರೀನ್ ಪುಟ್ ಪ್ರಿಂಟ್ ಸಂಸ್ಥೆ ಚಿಕ್ಕಮಗಳೂರು ಇವರ ನೇತ್ರತ್ವದಲ್ಲಿ ಕಾಪು ತಾಲೂಕಿನ ಎಲ್ಲಾ 16 ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸ್ಥಳೀಯ ಪಂಚಾಯತ್ ಗಳ ಅನುದಾನದಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸಾ ಅಭಿಯಾನ ಹಮ್ಮಿಕೊಳ್ಳಲಾಗದೆ.
ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವಾಗಿ ಅವುಗಳ ಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವುದು ಮತ್ತು ಬೀದಿನಾಯಿಗಳಿಂದ ರೇಬಿಸ್ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಅವುಗಳಿಗೆ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮವೂ ಏಕಕಾಲದಲ್ಲಿ ನಡೆಯಲಿದೆ. ಈ ಅಭಿಯಾನ ಅಕ್ಟೋಬರ್ 25 ರಿಂದ ಪ್ರಾರಂಭವಾಗಿ ಒಂದು ತಿಂಗಳವರೆಗೆ ನಡೆಯಲಿದ್ದು ಸಾರ್ವಜನಿಕರು ಸಾಕುನಾಯಿಗಳನ್ನು ಬೀದಿಗೆ ಬಿಡಬಾರದಾಗಿ ವಿನಂತಿಸಲಾಗಿದೆ. ಹಾಗೆಯೇ ಗ್ರೀನ್ ಪುಟ್ ಪ್ರಿಂಟ್ ಸಂಸ್ಥೆಯ ಸಿಬ್ಬಂದಿಯವರು ಬೀದಿನಾಯಿಗಳನ್ನು ಹಿಡಿಯಲು ತಮ್ಮ ಗ್ರಾಮಗಳಿಗೆ ಬಂದಾಗ ಅವರಿಗೆ ಸಹಕರಿಸಬೇಕಾಗಿ ಕೋರಲಾಗಿದೆ.
ಸದ್ರಿ ಸಂಸ್ಥೆಯವರು ಬೀದಿನಾಯಿಗಳನ್ನು ಹಿಡಿದು ತಂದು ಅವುಗಳಿಗೆ ಸಂತಾನಹರಣಶಸ್ತ್ರಚಿಕಿತ್ಸೆ ನಡೆಸಿ, ರೇಬಿಸ್ ಲಸಿಕೆ ನೀಡಿ, 3 ದಿನಗಳ ಕಾಲ ಅವುಗಳ ಅರೈಕೆ ಮಾಡಿ ನಂತರ ಯಾವ ಬೀದಿಯಲ್ಲಿ ಹಿಡಿದಿದ್ದಾರೊ ಅದೇ ಜಾಗದಲ್ಲಿ ಬಿಡಲಿದ್ದಾರೆ.
ಈ ಅಭಿಯಾನದ ಯಶಸ್ಸಿಗೆ ಕಾಪು ತಾಲೂಕು ವ್ಯಾಪ್ತಿಯ ಎಲ್ಲಾ ಪಂಚಾಯತ್ ಗಳ ಅಧ್ಯಕ್ಷರು, ಸರ್ವ ಸದಸ್ಯರುಗಳು, ಪಂ. ಅ. ಅಧಿಕಾರಿಗಳು / ಸಿಬ್ಬಂದಿ ವರ್ಗ, ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರ ಕೋರಲಾಗಿದೆ ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ.ಅರುಣ್ ಹೆಗ್ಡೆ ತಿಳಿಸಿದ್ದಾರೆ.
