ಶಿರ್ವ : ಸಾಹಿತ್ಯಕ್ಕೆ ಜಾತಿ ಧರ್ಮದ ಬೇಧವಿಲ್ಲ ಅದು ಎಲ್ಲರನ್ನೂ ಒಂದುಗೂಡಿಸುತ್ತದೆ - ಪ್ರೊ.ವೈ.ಭಾಸ್ಕರ್ ಶೆಟ್ಟಿ
ಶಿರ್ವ : ದೇಶಾಭಿಮಾನದ ಜೊತೆಗೆ ಭಾಷಾಭಿಮಾನ ಕೂಡ ಇರಬೇಕು. ಭಾಷೆಯ ಮೇಲೆ ಅಭಿಮಾನ ಇರಬೇಕು ಹೊರತು ಅಹಂಕಾರ ಇರಬಾರದು. ಸಾಹಿತ್ಯಕ್ಕೆ ಜಾತಿ ಧರ್ಮದ ಬೇಧವಿಲ್ಲ ಅದು ಎಲ್ಲರನ್ನೂ ಒಂದುಗೂಡಿಸುತ್ತದೆ. ಲಕ್ಷ ಲಕ್ಷದಲ್ಲಿ ಜನಪ್ರತಿನಿಧಿಗಳು ತಮಗಾಗಿ ವೆಚ್ಚ ಮಾಡುತ್ತಿರುವಾಗ ಅವರಿಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಲಕ್ಷ್ಯವಿಲ್ಲ. ಇದು ರಾಜಕೀಯ ವ್ಯವಸ್ಥೆಯ ದುರಂತವಾಗಿದೆ ಎಂದು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಮಾಸಾಚಾರಣೆ ಸಂಪದ - 2023 ತಿಂಗಳ ಸಡಗರ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಶಿರ್ವದ ಎಂ. ಎಸ್. ಆರ್. ಎಸ್ ಕಾಲೇಜಿನಲ್ಲಿ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ವಿದ್ಯಾ ಅಮ್ಮಣ್ಣಾಯ ಮಾತನಾಡಿ ಅಮ್ಮನ ಮಡಿಲಿನಿಂದ ಸಾಹಿತ್ಯವು ಆರಂಭವಾಗಿ ನಮ್ಮ ಬದುಕಿನ ಉದ್ದಕ್ಕೂ ಇರುತ್ತದೆ. ಸಾಹಿತ್ಯವು ಪದಗಳ ಜೋಡಣೆಯೊಂದಿಗೆ, ಅನುಭವ ಜೊತೆಗೆ ಭಾವನಾತ್ಮಕತೆಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಠೆ ವಹಿಸಿದ್ದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ದೇವದಾಸ ಹೆಬ್ಬಾರ್, ಎಂ. ಎಸ್. ಆರ್. ಎಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ನಯನ ಪಕ್ಕಳ, ಕಾಪು ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ದೀಪಕ್ ಕೆ. ಬೀರ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ದೇವದಾಸ ಹೆಬ್ಬಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ಎಂ. ಎಸ್. ಆರ್. ಎಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ವರಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು.
