ಪಲಿಮಾರು : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ : ಸಂಪದ - ೨೦೨೩ ತಿಂಗಳ ಸಡಗರ ಶಾಲೆಯತ್ತ ಸಾಹಿತ್ಯ ಸಂಪನ್ನ
Thumbnail
ಪಲಿಮಾರು : ನಾಡು, ನುಡಿ, ಸಾಹಿತ್ಯ, ಜನಪದ, ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಸದ್ವಿಚಾರದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ. ಉಡುಪಿ ಜಿಲ್ಲಾ ತಾಲೂಕು ಪರಿಷತ್ತಿನ ತಾಲೂಕು ಘಟಕಗಳಿಂದ ಸಾಹಿತ್ಯ ವಿಚಾರದ ಕಾರ್ಯಕ್ರಮಗಳ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನೂ ಗುರುತಿಸುವಂತಹ ಕಾರ್ಯ ನಡೆದಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆಯಲ್ಲಿ ೪೮ ಕಾರ್ಯಕ್ರಮಗಳು ಜರಗಿದೆ. ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ೫ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಕಾಪು ತಾಲೂಕು ಘಟಕದ ಕಾರ್ಯ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು‌ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ಬುಧವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಮಾಸಾಚಾರಣೆ ಸಂಪದ - ೨೦೨೩ ತಿಂಗಳ ಸಡಗರ ಶಾಲೆಯತ್ತ ಸಾಹಿತ್ಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗಾಯಕ ಡಾ. ಗಣೇಶ್ ಗಂಗೊಳ್ಳಿ ಜಾನಪದ ಸಾಹಿತ್ಯದಲ್ಲಿ ಮೌಲ್ಯಗಳು ವಿಷಯದೊಂದಿಗೆ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಗೌರವಾರ್ಪಣೆ : ಮುಂದಿನ ವರ್ಷ ಜರಗಲಿರುವ ಕಾಪು ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿರುವ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು, ಕವನ ಬರೆಯುವ ಹವ್ಯಾಸದ ಕಾಲೇಜಿನ ಯುವ ಕವಯಿತ್ರಿರನ್ನು ಜಿಲ್ಲಾ ಕಸಾಪ ವತಿಯಿಂದ ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ‌ಕಾಪು ತಾಲೂಕು ಘಟಕದ ಅಧ್ಯಕ್ಷರಾದ ‌ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ‌ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗ್ರೆಟ್ಟಾ ಮೊರಸ್, ಕನ್ನಡ ಶಿಕ್ಷಕ ಸುಧಾಕರ ಶೆಣೈ, ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್, ಸಂಘಟನಾ ಕಾರ್ಯದರ್ಶಿ ದೀಪಕ್ ಕೆ. ಬೀರ, ಅನಂತ ಮೂಡಿತ್ತಾಯ, ಡೊಮಿಯನ್ ನೊರೊನ್ಹ, ಸುಧಾಕರ ಪೂಜಾರಿ ಉಪಸ್ಥಿತರಿದ್ದರು. ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗ್ರೆಟ್ಟಾ ಮೊರಸ್ ಸ್ವಾಗತಿಸಿದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಪವಿತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು.
Additional image Additional image
29 Nov 2023, 06:35 PM
Category: Kaup
Tags: