ಕಾಪು : ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಬಳಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ
ಕಾಪು : ಭಾರತದಾದ್ಯಂತ ನವೆಂಬರ್ 15 ರಿಂದ ಜನವರಿ 26ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಗುರುವಾರ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಬಳಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು. ಈ ಯೋಜನೆಗಳನ್ನು ಕೊನೆಯ ಮೈಲಿಯವರೆಗೂ ಮುಟ್ಟಿಸುವುದು. ಈ ವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು ಎಂದರು.
ಶಾಸಕರು ಫಲಾನುಭವಿಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ ಮಂಜೂರಾದ ಉಚಿತ ಗ್ಯಾಸ್ ಸಂಪರ್ಕವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ, ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ಕೆನರಾ ಬ್ಯಾಂಕ್ ನ ಹಿರಿಯಡಕ ಶಾಖೆಯ ಪ್ರಬಂಧಕರಾದ ಅವಿನಾಶ್ ಕಿಣಿ, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
