ಕಾಪು : ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸುವುದೇ ಪುಣ್ಯದ ಕಾರ್ಯ - ಸುಬ್ರಹ್ಮಣ್ಯ ಶೆಟ್ಟಿ
ಕಾಪು : ಮಹಾತ್ಮಗಾಂಧೀಜಿಯವರ ಕರೆಗೆ ಓಗೊಟ್ಟು ತಮ್ಮ ಸರ್ವಸ್ವವನ್ನು ತ್ಯಾಗಮಾಡಿ ಸಮರ್ಪಣಾಭಾವದಿಂದ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಹೋರಾಡಿ, ಲಾಠಿಏಟು, ಸೆರೆಮನೆ ವಾಸ, ವಿವಿಧ ಚಿತ್ರಹಿಂಸೆಗಳನ್ನು ಅನುಭವಿಸಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಪ್ರಾತ:ಸ್ಮರಣೀಯರು, ಅವರನ್ನು ಸ್ಮರಿಸುವುದೇ ಜೀವನದ ಅವಿಸ್ಮರಣೀಯ ಕ್ಷಣ ಹಾಗೂ ಪುಣ್ಯದ ಕಾರ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ನುಡಿದರು.
ಅವರು ಸೋಮವಾರ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಕಾಪು ಪಡುಗ್ರಾಮ ಕೊಪ್ಪಲಂಗಡಿ ಸಾಲ್ಯಾನ್ ತೋಟ "ಶ್ರೀಪ್ರಭಾ"ನಿವಾಸದಲ್ಲಿ ಏರ್ಪಡಿಸಿದ ಸ್ವಾತಂತ್ರ್ಯ ವೀರ ಸಹೋದರರಾದ ಕಾಪು ವೀರಪ್ಪ ಎಂ.ಸಾಲಿಯಾನ್ ಕಾಪು ಹರೇಂದ್ರ ಸಾಲಿಯಾನ್‌ರವರ ಸಂಸ್ಮರಣೆ "ಅಮೃತಭಾರತಿಗೆ ಕನ್ನಡದ ಆರತಿ" ಸ್ವಾತಂತ್ರ್ಯ ಸೇನಾನಿಗಳ ನೆನಪಿನಲ್ಲಿ ಏರ್ಪಡಿಸಿದ "ಅಮೃತಾಂಜಲಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕಾಪು ತಾಲೂಕು ಕಸಾಪ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತಾಲೂಕಿನ ಹೋರಾಟಗಾರರನ್ನು ಗುರುತಿಸಿ ಅವರ ಮನೆಯಂಗಳದಲ್ಲಿ ಕುಟುಂಬದ ಸದಸ್ಯರನ್ನೊಳಗೊಂಡು ಹಿರಿಯ ಹೋರಾಟಗಾರರನ್ನು ಸ್ಮರಿಸುವ ಇಂತಹ ಸ್ತುತ್ಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ದಿ.ವೀರಪ್ಪ ಎಂ.ಸಾಲ್ಯಾನ್‌ರವರ ಹಿರಿಯ ಪುತ್ರಿ ಪ್ರಭಾವತಿ ಪಿ.ಸಾಲಿಯಾನ್ ದೀಪ ಪ್ರಜ್ವಲನದೊಂದಿಗೆ ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು. ಕಾಪು ಪುರಸಭಾ ಮಾಜಿ ಸದಸ್ಯ ಕೆ.ಎಚ್.ಉಸ್ಮಾನ್ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ನೆನಪು ಸದಾ ಉಳಿಯುವಂತೆ ಅವರು ವಾಸಿಸಿದ ಹಾಗೂ ನಡೆದಾಡಿದ ರಸ್ತೆಗೆ "ವೀರಪ್ಪ ಎಂ.ಸಾಲಿಯಾನ್ ರಸ್ತೆ" ಎಂದು ನಾಮಕರಣ ಮಾಡುವಂತೆ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡು ಪುರಸಭೆಗೆ ನೀಡುವಂತೆ ಸಲಹೆ ನೀಡಿದಲ್ಲದೆ ಈ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಂದಾಳು ಮಾಧವ ಪಾಲನ್ ಕಾಪು, ಜಿಲ್ಲಾ ಕಸಾಪ ಸಭಾಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಕುರ್ಕಾಲು ಗ್ರಾಮ ಪಂ.ಅಧ್ಯಕ್ಷ ಪ್ರಶಾಂತ್ ಪೂಜಾರಿ, ವೀರಪ್ಪ ಸಾಲಿಯಾನ್‌ರವರ ಪುತ್ರಿಯರಾದ ಜಯಲಕ್ಷ್ಮಿ ಪೂಜಾರಿ, ಮೀರಾ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷೆ ಸಾವಿತ್ರಿಗಣೇಶ್, ಅರುಣ್ ಬಂಗೇರ, ಸುಧಾಕರ ಪಾಣಾರ ಬೆಳ್ಳೆ, ಜಿಲ್ಲಾ ದೈಹಿಕ ಶಿಕ್ಷಣ ನಿವೃತ್ತ ಅಧಿಕಾರಿ ಮಧುಕರ್ ಎಸ್.ಕಲ್ಯಾ ವೇದಿಕೆಯಲ್ಲಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ ಮಾತನಾಡಿ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವ ಹೊಸ್ತಿಲಲ್ಲಿ ಕಾಪು ತಾಲೂಕಿನ ಹೋರಾಟಗಾರರ ವಿವರವನ್ನು ಸಂಗ್ರಹಿಸಿ ಅವರ ದೇಶಭಕ್ತಿ, ತ್ಯಾಗ, ಕೊಡುಗೆಯನ್ನು ಸ್ಮರಿಸಿ ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ತಾಲೂಕು ಘಟಕ ಶೃದ್ದಾಭಕ್ತಿಯಿಂದ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಾದ ವೀರಪ್ಪ ಎಂ.ಸಾಲಿಯಾನ್‌ರವರ ನೆನಪು ಸದಾ ಉಳಿಯುವಂತೆ ಅವರು ವಾಸಿಸಿದ ಹಾಗೂ ನಡೆದಾಡಿದ ರಸ್ತೆಗೆ "ವೀರಪ್ಪ ಎಂ.ಸಾಲಿಯಾನ್ ರಸ್ತೆ" ಎಂದು ನಾಮಕರಣ ಮಾಡುವ ಪ್ರಸ್ತಾವದ ಬಗ್ಗೆ ನಿರ್ಣಯ ಕೈಗೊಂಡು ಕಾಪು ಪುರಸಭೆಗೆ ಮನವಿ ಸಲ್ಲಿಸುವುದಾಗಿ ತಿಳಿಸಿ ಈನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳೂ ಕೈಜೋಡಿಸುವಂತೆ ವಿನಂತಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ನಿರೂಪಿಸಿದರು. ಗೌರವ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ವಂದಿಸಿದರು.
