ಪಲಿಮಾರು : ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ
ಪಲಿಮಾರು : ವಿದ್ಯಾರ್ಥಿಗಳು ಕನಿಷ್ಠ 2 ದಿನಪತ್ರಿಕೆಗಳನ್ನು ಪ್ರತಿನಿತ್ಯ ಓದಬೇಕು. ಕೇವಲ ಪಠ್ಯ ಪುಸ್ತಕಗಳಿಂದ ಮಾತ್ರವಲ್ಲ, ಹೊರಗಿನ ಪ್ರಪಂಚದ ಜ್ಞಾನವನ್ನು ಎಲ್ಲಾ ಮೂಲಗಳಿಂದ ಗಳಿಸಿ ಜೀವನದಲ್ಲಿ ಯಶಸ್ವಿಗಳಾಗಬೇಕು. ಉತ್ತಮ ವಿದ್ಯಾರ್ಥಿಗಳಾಗಿ, ನೀವು ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಕೀರ್ತಿ ಗೌರವವನ್ನು ತರಬೇಕು ಎಂದು ಪಲಿಮಾರು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಗಾಯತ್ರಿ ಡಿ. ಪ್ರಭು ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು, ಇಲ್ಲಿ ಪಲಿಮಾರು ಸುತ್ತಮುತ್ತಲಿನ ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಕನ್ನಡ ಶಿಕ್ಷಕರಾದ ಪಿಲಾರು ಸುಧಾಕರ್ ಶೆಣೈಯವರ ನೇತೃತ್ವದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಸ್ಥಳೀಯ ಐದು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ ಚಾಂಪಿಯನ್‌ಶಿಪ್ ಪಡೆದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಿರೆ ದ್ವಿತೀಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಂತೂರು ಕೊಪ್ಪಲ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಪಲಿಮಾರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ರಾಯೇಶ್ವರ್ ಪೈ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶೋಭಾ, ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ, ಸ್ಥಳೀಯ ಉದ್ಯಮಿಗಳಾದ ದಿನೇಶ್ ಪ್ರಭು, ಸಂಸ್ಥೆಯ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಯೋಗೀಶ್ ಸುವರ್ಣ, ಹಳೆ ವಿದ್ಯಾರ್ಥಿಗಳಾದ ಪ್ರವೀಣ್, ಪ್ರಸಾದ್, ರಾಯೇಶ್ವರ್ ಪೈ ಹಾಗೂ ಪ್ರಾಂಶುಪಾಲರು ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದರು.
ಹಿರಿಯ ಸಹಶಿಕ್ಷಕರಾದ ಸುನೀತಾ ಸ್ವಾಗತಿಸಿ, ಪಿಲಾರು ಸುಧಾಕರ್ ಶೆಣೈ ರಸಪ್ರಶ್ನೆ ಹಾಗೂ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಆಂಗ್ಲಭಾಷಾ ಶಿಕ್ಷಕರಾದ ಕೆ. ಶಿವಾನಂದ ವಂದಿಸಿದರು.
