ಕಾಪು : 800 ಕ್ಕೂ ಅಧಿಕ ಮಕ್ಕಳಿಗೆ ಸುಮಾರು 1.50 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಪರಿಕರಗಳ ವಿತರಣೆ
Thumbnail
ಕಾಪು : ಮುಂಬಯಿಯ ಮಾಜಿ ಕಾರ್ಪೊರೇಟರ್, ಜೋಸೆಫ್ ಪಟೇಲ್ ಎಸ್ಟೇಟ್ ನವರಾತ್ರಿ ದುರ್ಗಾಪೂಜಾ ಮಂಡಲ್ ಇದರ ಸ್ಥಾಪಕಿ ಕಾಪು ಗರಡಿಮನೆ ದಿ. ಗೀತಾ ಯಾದವ್ ಅವರ ಸ್ಮರಣಾರ್ಥ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಪು ಪರಿಸರದ ವಿವಿಧ ಶಾಲೆಗಳ 800 ಕ್ಕೂ ಅಧಿಕ ಮಕ್ಕಳಿಗೆ ಸುಮಾರು 1.50 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಶೈಕ್ಷಣಿಕ ಪರಿಕರಗಳನ್ನು ವಿತರಿಸಿದ ದಿ‌. ಗೀತಾ ಯಾದವ್ ಅವರ ಪುತ್ರ ಸಂತೋಷ್ ಯಾದವ್ ಅವರು ಮಾತನಾಡಿ, ಕಾಪು ಗರಡಿ ಮನೆಯಲ್ಲಿ ಹುಟ್ಟಿ ಬೆಳೆದ ಮಾತೃಶ್ರೀಯವರು ಮುಂಬಯಿಯಲ್ಲಿ ಸುಮಾರು 25 ವರ್ಷಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಗೈದು, ರಾಜಕೀಯವಾಗಿಯೂ ಬೆಳೆದಿದ್ದಾರೆ. ಇದೀಗ ನಮ್ಮೊಡನೆ ಇಲ್ಲದ ಅವರ‌ ಸ್ಮರಣೆಗಾಗಿ ಕಳೆದ ಮೂರು ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮುಂಬಯಿಗೆ ಸೀಮಿತವಾಗಿದ್ದ ಸೇವಾ ಕಾರ್ಯಗಳನ್ನು ಅವರ ಹುಟ್ಟೂರಿನಲ್ಲಿಯೂ ನಡೆಸುವ ಮೂಲಕ ಅವರಿಗೆ ಹುಟ್ಟೂರಿನ ಬಗೆಗೆ ಇದ್ದ ಪ್ರೀತಿಯನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಕಾಪು ಗರಡಿ ರಸ್ತೆಯಲ್ಲಿರುವ ಅಂಗನವಾಡಿ, ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ವಿಶ್ವನಾಥ್ ಪೂಜಾರಿ ಕಾಪು, ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ, ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ‌ ರಮಣಿ ವೈ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.
10 Feb 2024, 04:11 PM
Category: Kaup
Tags: