ಫೆ.17 : ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶ
ಕಾಪು : ಲೋಕಸಭಾ ಚುನಾವಣಾ ಸಿದ್ಧತೆಗಾಗಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಫೆ.17ರಂದು ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜಿನ ಮುಂಭಾಗದ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು
ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದರು
ಕಾಪು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಹಭಾಗಿತ್ವದಲ್ಲಿ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲಾ ಹಂತದ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಶನಿವಾರ ಅಪರಾಹ್ನ 2ಗಂಟೆಯಿಂದ ಪ್ರಾರಂಭಗೊಳ್ಳುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯ ಕ್ರಮದಲ್ಲಿ ಎಐಸಿಸಿ ಪ್ರ. ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜವಾಲ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಮುಖಂಡರಾದ ರೋಜಿ ಜೋನ್, ಸಲೀಂ ಅಹ್ಮದ್, ಸಚಿವರು, ಪಕ್ಷದ ಶಾಸಕರು, ಮುಖಂಡರೆಲ್ಲರೂ ಭಾಗವಹಿಸಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ತೆಕ್ಕೆಗೆ ಮರಳಿ ಪಡೆಯುವ ಗುರಿಯೊಂದಿಗೆ ರಾಜ್ಯ ಮಟ್ಟದ ಸಮಾವೇಶವನ್ನು ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಬೂತ್ ಮಟ್ಟದಿಂದಲೇ ಸಮಿತಿಗಳನ್ನು ರಚಿಸಲಾಗುವುದು ಎಂದು ಸೊರಕೆ ವಿವರಿಸಿದರು.
ಶನಿವಾರ ಬೆಳಿಗ್ಗೆ 10 ಗಂಟೆಗೆ ಕಾಪುವಿನಿಂದ ಹೊರಟು, 11 ಗಂಟೆಗೆ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಹೆಜಮಾಡಿ ಟೋಲ್‌ನಲ್ಲಿ ಜತೆ ಸೇರಲಿದ್ದಾರೆ. ಅಲ್ಲಿಂದ 300ಕ್ಕೂ ಅಧಿಕ ಬಸ್‌ಗಳ ಮೂಲಕವಾಗಿ ಕಾರ್ಯಕರ್ತರು ಸಮಾವೇಶದ ಮೈದಾನದವರೆಗೆ ತೆರಳಲಿದ್ದಾರೆ.
ರಾಜ್ಯದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊ ಳ್ಳುವ ನಿರೀಕ್ಷೆ ಇದೆ ಎಂದ ಸೊರಕೆ, ಪಕ್ಷದ ಸಾಧನೆ ಹಾಗೂ ಮುಂದಿನ ಯೋಜನೆಗಳನ್ನು ಈ ಸಮಯದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಉಡುಪಿ ಜಿಲ್ಲೆಯ ಪ್ರತಿ ಬೂತ್ ಮಟ್ಟದಿಂದ ಕನಿಷ್ಠ ತಲಾ 20 ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಜಿಲ್ಲೆಯಿಂದ ಒಟ್ಟು ಕನಿಷ್ಠ 15,000 ಮಂದಿ ಕಾಂಗ್ರೆಸಿಗರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯನ್ನು ಹೊಂದಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಲಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಬಂಗೇರ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ ಉಪಸ್ಥಿತರಿದ್ದರು.
