ಮುಲ್ಕಿ : ಸಿ.ಎಸ್.ಐ. ಬಾಲಿಕಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಮುಲ್ಕಿ: ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಮುಲ್ಕಿ ಸಿ.ಎಸ್.ಐ. ಬಾಲಿಕಾಶ್ರಮದ ಮಕ್ಕಳೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭ ಡಾ. ಐಶ್ವರ್ಯ ಸಿ.ಅಂಚನ್ ಆಯುರ್ವೇದ ಜೀವನ ಪದ್ಧತಿ ಮತ್ತು ಚಿಕಿತ್ಸಾ ಮಾಹಿತಿ ನೀಡಿದರು.
ಇದೇ ಸಂದರ್ಭ ಸ್ನಾತಕೋತ್ತರ 6ನೇ ರ‍್ಯಾಂಕ್ ವಿಜೇತೆ ಡಾ. ಐಶ್ವರ್ಯ ಸಿ. ಅಂಚನ್‌ರವರನ್ನು ಸಂಘಟಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಬಾಲಿಕಾಶ್ರಮದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಸ್ವಾವಲಂಬಿಗಳಾಗಿ, ಸಾಧಕರಾಗಿ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ಸಿ.ಎಸ್.ಐ. ಚರ್ಚ್ ಸಭಾಪಾಲಕ ರೆ.ಫಾ. ಸ್ಟೀವನ್ ಸರ್ವೋತ್ತಮ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧಕರ ಶ್ರಮ ಬಾಲೆಯರಿಗೆ ಪ್ರೇರಣೆಯಾಗಲಿ ಎಂದರು.
ಸೇವಾದಳದ ಅಧ್ಯಕ್ಷ ಸಂತೋಷ್ ಪೂಜಾರಿ, ಮಹಿಳಾ ಮಂಡಳಿ ಅಧ್ಯಕ್ಷೆ ರೋಹಿಣಿ ಆನಂದ್, ಕಲ್ಪತರು ಸ್ವಸಹಾಯ ಸಂಘದ ಮೇಲ್ವಿಚಾರಕ ರಮಾನಂದ ಪೂಜಾರಿ, ಬಾಲಿಕಾಶ್ರಮದ ಮೇಲ್ವಿಚಾರಕಿ ಶಾಂತಿ ಮುಖ್ಯ ಅತಿಥಿಗಳಾಗಿದ್ದರು.
ರವಿರಾಜ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ರೋಹಿಣಿ ಆನಂದ್ ಸ್ವಾಗತಿಸಿದರು. ಕಾರ್ಯದರ್ಶಿ ತೇಜವತಿ ವಂದಿಸಿದರು.
