ಉಚ್ಚಿಲ : ನಟೇಶ ನೃತ್ಯ ನಿಕೇತನ - ವಿಂಶತಿ ಸಂಭ್ರಮ ; ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಉಚ್ಚಿಲ : ಭಾರತವು ಹಲವು ಸಂಸ್ಕೃತಿಗಳ ತವರು. ಬಹು ಬದುಕುಗಳ ಕಥನ ಎಂಬ ಮಾತಿನಂತೆ ವಿವಿಧ ಅಭಿವೃದ್ಧಿಯ ಜೊತೆಗೆ ಸಂಸ್ಕಾರಯುತ ಮಾನವ ಸಂಪನ್ಮೂಲ ದೇಶದ ಆಸ್ತಿ. ಪಾಶ್ಚಿಮಾತ್ಯದೆಡೆಗೆ ಮಕ್ಕಳು ವಾಲುತ್ತಿರುವ ಸಂದರ್ಭ ನಮ್ಮ ನೆಲದ ಸಂಸ್ಕೃತಿ, ಸಂಗೀತದ ಅಭಿರುಚಿ ಬೆಳೆಸುವುದು ಅನಿವಾರ್ಯ. ಐತಿಹಾಸಿಕ ಸಾಂಸ್ಕೃತಿಕ ನೃತ್ಯ ಪ್ರಾಕಾರವಾದ ಭರತನಾಟ್ಯವನ್ನು ನೂರಾರು ಮಕ್ಕಳಿಗೆ ಕಲಿಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕೀರ್ತಿ ನಟೇಶ ನೃತ್ಯ ನಿಕೇತನ ಸಂಸ್ಥೆಗಿದೆ. ವೃತ್ತಿ ಮತ್ತು ಲೌಕಿಕ ಬದುಕಿನಲ್ಲಿ ಲಯ ಕಂಡುಕೊಂಡ ಮಂಗಳ ಕಿಶೋರ್ ದೇವಾಡಿಗ ಅವರ ನಾಟ್ಯ ಕೇಂದ್ರದಿಂದ ಭರತನಾಟ್ಯದ ಕಲಿಕೆಯ ಜೊತೆಗೆ ಸಾಧಕರನ್ನು ಗುರುತಿಸುವ ಕಾಯಕ ಮುಂದೆಯೂ ನಡೆಯಲಿ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಉಚ್ಚಿಲದಲ್ಲಿ ನಟೇಶ ನೃತ್ಯ ನಿಕೇತನ ಉಚ್ಚಿಲದ ವಿಂಶತಿ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಅರ್ಚಕರಾದ ಗೋವಿಂದ ರಾಜ್ ಭಟ್ ಉದ್ಘಾಟಿಸಿ, ಶುಭಹಾರೈಸಿದರು.
ಪ್ರಶಸ್ತಿ ಪ್ರದಾನ : ಪತ್ರಿಕಾರಂಗದಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಸಂಗೀತ ಕ್ಷೇತ್ರದಲ್ಲಿ ಶರತ್ ಉಚ್ಚಿಲ, ಭರತನಾಟ್ಯ ಕ್ಷೇತ್ರದಲ್ಲಿ ಡಾ| ರಶ್ಮಿ ಕಲ್ಕೂರ, ಯಕ್ಷಗಾನ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ವೈ.ಎಲ್.ವಿಶ್ವರೂಪ ಮಧ್ಯಸ್ಥ ನೀಲಾವರ, ಶಿಕ್ಷಣ ಕ್ಷೇತ್ರದಲ್ಲಿ ವನಿತಾ, ನಾಟ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರಕಾಶ್ ಕಾರ್ಕಳರಿಗೆ ನಟೇಶ ಪ್ರಶಸ್ತಿಯನ್ನು ನೀಡಲಾಯಿತು.
ಪ್ರಸಾದನ ಕ್ಷೇತ್ರದಲ್ಲಿ ರಮೇಶ್ ಉಡುಪಿ, ವೇಷಭೂಷಣ ಸಂಸ್ಥೆ ಕಲಾನಿಕೇತನ ಸುರತ್ಕಲ್ ಇದರ ಸ್ವರ್ಣ ಎಲ್ ಶೆಟ್ಟಿ ಇವರಿಗೆ ವರ್ಣಾರ್ಪಣ ಪ್ರಶಸ್ತಿ, ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ ಇವರಿಗೆ ನಾಟ್ಯ ಕಲಾಂಜಲಿ ಪ್ರಶಸ್ತಿಯನ್ನು ಅತಿಥಿಗಳ ಸಮ್ಮುಖ ಪ್ರದಾನಿಸಲಾಯಿತು.
ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಾಲೂಕು ತಹಶೀಲ್ದಾರ್ ಡಾ| ಪ್ರತಿಭ ಆರ್., ಉಚ್ಚಿಲ ಬಡಾ ಗ್ರಾ. ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ಉಚ್ಚಿಲ ಮಹಾಲಕ್ಷ್ಮಿ ದೇವಳದ ಅರ್ಚಕ ಕೆ.ವಿ.ರಾಘವೇಂದ್ರ ಉಪಾಧ್ಯಾಯ,
ನಾದಶ್ರೀ ಸೊಸೈಟಿ ಕುಕ್ಕಿಕಟ್ಟೆ ಉಡುಪಿ ಇದರ ಅಧ್ಯಕ್ಷ ಶ್ರೀಧರ ದೇವಾಡಿಗ, ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ, ನೃತ್ಯ ಗುರು ಮಂಗಳ ಕಿಶೋರ್, ಸಂಚಾಲಕರಾದ ಪ್ರಕಾಶ್ ದೇವಾಡಿಗ, ಕಿಶೋರ್ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.
ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ ಅಧ್ಯಕ್ಷತೆ ವಹಿಸಿದ್ದರು.
ಪಂಚಮಿ ಪ್ರಾರ್ಥಿಸಿದರು. ನೃತ್ಯ ಗುರು ಮಂಗಳ ಕಿಶೋರ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.
