ನಂದಿಕೂರು : ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಮಹಿಳೆ ಮೃತ್ಯು
ನಂದಿಕೂರು : ಮಂಗಳೂರಿನಿಂದ ಕಾರ್ಕಳ ಮಾಳದತ್ತ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಮೃತ ಮಹಿಳೆಯನ್ನು ಕಾವೂರಿನ ಸುಮಂಗಲಾ ಅಭ್ಯಂಕರ್(51) ಎಂದು ಗುರುತಿಸಲಾಗಿದೆ.
ಉಪನಯನ ಸಮಾರಂಭದಲ್ಲಿ ಭಾಗವಹಿಸಲು ಮಂಗಳೂರು ಕಾವೂರಿನ ತಮ್ಮ ನಿವಾಸದಿಂದ ತೆರಳುತ್ತಿದ್ದರು. ಪತಿ ಪುರುಷೋತ್ತಮ ಅಭ್ಯಂಕರ್(61) ಅವರು ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಸ್ಥಳೀಯರು ಹರಸಾಹಸಪಟ್ಟು ಸುಮಂಗಲಾ ಅವರನ್ನು ಹೊರತೆಗೆದಿದ್ದರೂ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
