ಎ.30 - ಮೇ.5 : ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಗದ್ದಿಗೆಬೆಟ್ಟು ಕೈಪುಂಜಾಲು - ನೂತನ ಶಿಲಾಮಯ ಗರ್ಭಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ, ನೇಮೋತ್ಸವ
ಕಾಪು : ತಾಲೂಕಿನ ಕೈಪುಂಜಾಲು ಉಳಿಯಾರಗೋಳಿ ಗ್ರಾಮದ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಗದ್ದಿಗೆಬೆಟ್ಟು ಇಲ್ಲಿ ಎ.30 - ಮೇ.5ರವರೆಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕರಾದ ಮಡುಂಬು ಶ್ರೀ ನಾರಾಯಣ ತಂತ್ರಿ ಇವರ ನೇತೃತ್ವದಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಗಳು ಜರಗಲಿವೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾವಗುತ್ತು ಕಿರಣ್ ಆಳ್ವ ಹೇಳಿದರು.
ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಪ್ರಿಲ್ 30, ಮಂಗಳವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಆಕರ್ಷಕ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ, ಮೇ 1ರಂದು ವಿವಿಧ ಧಾರ್ಮಿಕ ಕಾರ್ಯಗಳು, ಮೇ 2 ರಂದು ದೈವಗಳ ಪ್ರತಿಷ್ಠೆ, ಅಮ್ಮನವರ ಸಾನಿಧ್ಯ ಸಂಕಲ್ಪ, ಶ್ರೀ ಬಬ್ಬು ಸ್ವಾಮಿ, ಪರಿವಾರ ದೈವಗಳ ದರ್ಶನ ಸೇವೆ, ಗರ್ಭಗುಡಿ ಪ್ರವೇಶ, ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6 ರಿಂದ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಧಾರ್ಮಿಕ ಉಪನ್ಯಾಸ ಇರಲಿದೆ. ರಾತ್ರಿ 8:30 ರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಲಿದೆ.
ಮೇ. 3 ರಂದು ಸಂಜೆ ಗಂಟೆ 6ಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾವಗುತ್ತು ಕಿರಣ್ ಆಳ್ವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿದ್ದು ಪ್ರಸಾದ್ ಶೆಟ್ಟಿ ಕುತ್ಯಾರು ಇವರ ಧಾರ್ಮಿಕ ಉಪನ್ಯಾಸ ಇರಲಿದೆ. ರಾತ್ರಿ ಗಂಟೆ 8:30 ರಿಂದ ದೈವರಾಜ ಶ್ರೀ ಬಬ್ಬು ಸ್ವಾಮಿ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನವಾಗಲಿದೆ.
ಮೇ.4ರಂದು ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಗಮಾನಿಗ ದೇವಿಯ ನೇಮೋತ್ಸವ, ಮೇ.5 ರಂದು ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ, ಜೋಡು ಗುಳಿಗ ದೈವಗಳ ನೇಮೋತ್ಸವ ಜರಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
