ಕಾಪು : ಕನ್ನಡ ಸಾಹಿತ್ಯ ಪರಿಷತ್ತು ಇದರ ೧೧೦ನೇ ಸಂಸ್ಥಾಪನಾ ದಿನಾಚರಣೆ
ಕಾಪು : ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಿರಿಯ ಸಾಹಿತಿಗಳ ಕೊಡುಗೆ ಅಪಾರ. ಪ್ರಾಕೃತಿಕ ಅನುಭವ, ಲೋಕಜ್ಞಾನ, ಅಧ್ಯಯನ ಜ್ಞಾನ, ಭಾಷಾ ಜ್ಞಾನ ಬೆಳೆದಾಗ ಸಾಹಿತ್ಯ ಸೃಷ್ಟಿಗೆ ಬೇಕಾದ ಮನೋಸ್ಥಿತಿ ನಿರ್ಮಾಣ ಆಗುತ್ತದೆ. ಆಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಭಾಷಾಭಿಮಾನ ಕುಂಠಿತಗೊಳ್ಳುತ್ತಿದೆ. ಕನ್ನಡ ಭಾಷಾ ಪುನಶ್ಚೇತನಕ್ಕೆ ಕಾಯಕಲ್ಪ ಅಗತ್ಯ ಎಂದು ಹಿರಿಯ ವಿದ್ವಾಂಸರಾದ ವೇದಮೂರ್ತಿ ಅಶೋಕ ಆಚಾರ್ಯ ಕಲ್ಯಾ ಅಭಿಪ್ರಾಯಪಟ್ಟರು.
ಅವರು ರವಿವಾರ ಕಾಪು ರೋಟರಿ ಶತಾಬ್ದಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇದರ "೧೧೦ನೇ ಸಂಸ್ಥಾಪನಾ ದಿನಾಚರಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ೧೧೦ ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಾಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಇವರ ಮುಂದಾಳತ್ವದಲ್ಲಿ ಅಂದಿನ ಹಿರಿಯ ವಿದ್ವಾಂಸರು,ಚಿಂತಕರ ವಿಶೇಷ ಮುತುವರ್ಜಿಯಲ್ಲಿ ಸ್ಥಾಪನೆಗೊಂಡ ಸಂಘಟನೆ ಇಂದು ರಾಷ್ಟೀಯ ಮಟ್ಟದಲ್ಲಿ ಅಲ್ಲದೆ ದೇಶವಿದೇಶಗಳಲ್ಲಿ ಇರುವ ಕನ್ನಡ ಸಂಘಟನೆಗಳನ್ನು ಸಾಹಿತ್ಯ ಪರಿಷತ್ತು ಇವರ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಕನ್ನಡ ನಾಡು,ನುಡಿ ಸಂಸ್ಕೃತಿ,ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನ ಮಾಡುತ್ತಿದೆ ಎಂದರು.
ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಾಪು ರೋಟರಿ ಕ್ಲಬ್ ಅಧ್ಯಕ್ಷ ರಾಜೇಂದ್ರನಾಥ್ ಸಾಂದರ್ಭಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ನರಸಿಂಹ ಮೂರ್ತಿ, ಕಸಾಪ ಹಿರಿಯ ಸದಸ್ಯರುಗಳಾದ ಪ್ರಜ್ಞಾ ಮಾರ್ಪಳ್ಳಿ, ಮಧುಕರ್ ಎಸ್.ಕಲ್ಯಾ, ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್, ದೇವದಾಸ ಪಾಟ್ಕರ್, ಸತ್ಯಸಾಯಿ ಪ್ರಸಾದ್, ಡಿ.ಆರ್.ನೊರೋನ್ಹಾ, ಗ್ರೆಟ್ಟಾ ಮೋರಾಸ್, ಸುಧಾಕರ ಶೆಣೈ, ಅಬ್ಬಾಸ್ ಎಂ.ಎಸ್.ಕಣ್ಣಂಗಾರ್, ವೇಣುಕೃಷ್ಣ, ಶಿವಾನಂದ ಕಾಮತ್ ಶಿರ್ವ, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜಾನಪದ ಕಲಾವಿದೆ ಗಣೇಶ್ ಗಂಗೊಳ್ಳಿ ನಾಡಗೀತೆ, ಭಾವಗೀತೆಗಳನ್ನು ಹಾಡಿದರು. ಸಮಿತಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು ನಿರೂಪಿಸಿದರು. ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ವಂದಿಸಿದರು.
