ಪಡುಬಿದ್ರಿ : ಅದಾನಿ ಪವರ್ ಕಂಪನಿ ಭದ್ರತಾ ಸಿಬ್ಬಂದಿ ಪ್ರತಿಭಟನೆ ; ಬೇಡಿಕೆ ಈಡೇರಿಕೆಗೆ ಒಪ್ಪಿಗೆ
ಪಡುಬಿದ್ರಿ : ವೇತನ ಹೆಚ್ಚಳ, ತುಟ್ಟಿಭತ್ಯೆ ಏರಿಕೆ ಇತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅದಾನಿ ಪವರ್ ಕಂಪನಿಯ
ಭದ್ರತಾ ಸಿಬ್ಬಂದಿಗಳು ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಸಿಬ್ಬಂದಿ ಬೇಡಿಕೆ ಈಡೇರಿಕೆಗೆ ಕಂಪನಿ ಒಪ್ಪಿಗೆ ಸೂಚಿಸಿ ಪ್ರತಿಭಟನೆಗೆ ಜಯ ಸಿಕ್ಕಿದಂತಾಗಿದೆ.
ಅದಾನಿ ಪವರ್ ಕಂಪನಿಯಲ್ಲಿ ಚೆನ್ನೈ ಮೂಲದ ಸೆಕ್ಯೂರಿಟಿ ಕಂಪೆನಿ ಗುತ್ತಿಗೆ ಕಾರ್ಮಿಕರಾಗಿ 19 ವರ್ಷಗಳಿಂದ ದುಡಿಯುತ್ತಿರುವ ಸುಮಾರು 74 ಭದ್ರತಾ ಸಿಬ್ಬಂದಿ ಶಾಂತಿಯುತ ಹೋರಾಟ ಆರಂಭಿಸಿದ್ದರು.
ಮೊದಲು ಇಲ್ಲಿನ ಸಿಬ್ಬಂದಿ ಪ್ರತೀಕ್ ಹೆಗ್ಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರಿಗೆ ಇತರೆ ಭದ್ರತಾ ಸಿಬ್ಬಂದಿ ಬೆಂಬಲ ಸೂಚಿಸಿದ್ದರು.
ತುಟ್ಟಿಭತ್ಯೆ ಜತೆಗೆ ರೂ.400 ಸಂಬಳ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಎಪ್ರಿಲ್ ತಿಂಗಳಿಂದ ಗಾರ್ಡಿಯನ್ ಹಾಗೂ ಅದಾನಿ ಕಂಪೆನಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಒಂದೂವರೆ ತಿಂಗಳಾದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸತ್ಯಾಗ್ರಹ ಆರಂಭಿಸಿದ್ದೆವು. ಶಾಸಕರ ಮಧ್ಯಸ್ಥಿಕೆಯಲ್ಲಿ ಕಂಪೆನಿ ವೇತನ ಹೆಚ್ಚಳಕ್ಕೆ ಒಪ್ಪಿದ್ದು, ಇತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಕಾರ್ಮಿಕ ಮುಖಂಡ ಸುನಿಲ್ ಹೇಳಿದರು.
