ಕಾಪು : ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ಕಾರ್ಯಾಗಾರ
ಕಾಪು : ಇಲ್ಲಿನ ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಯಿತು.
ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ.ಕೆ.ಪ್ರಶಾಂತ್ ಶೆಟ್ಟಿಯವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕಾದರೆ ಶಿಕ್ಷಕರು ಪ್ರತಿನಿತ್ಯ ಹಲವಾರು ತರಬೇತಿಯನ್ನು ಹಾಗೂ ಅನುಭವವನ್ನು ಪಡೆಯಬೇಕಾಗುತ್ತದೆ. ತಮ್ಮ ಜ್ಞಾನದ ಜೊತೆಗೆ ಇತರ ಕೌಶಲಗಳನ್ನು ಪಡೆದುಕೊಂಡಾಗ ಅತ್ಯುತ್ತಮ ಬೋಧನೆಗೆ ಪೂರಕವಾಗುತ್ತದೆ ಎಂಬ ಸಂದೇಶವನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಕೋಟ ವಿದ್ಯಾಸಂಸ್ಥೆಯ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ಸಾಹಿತ್ಯಕಾರ, ಟಿ.ವಿ.ನಿರೂಪಣೆಗಾರ, ನಿರ್ದೆಶಕ ರಂಗಕರ್ಮಿ, ಜೇಸಿಯ ತರಬೇತುದಾರರಾದ ನರೇಂದ್ರ ಕುಮಾರ್ ಕೋಟ ಮಾತನಾಡಿ ಶಿಕ್ಷಕರು ತಮ್ಮ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕಾದರೆ ಪರಿಪೂರ್ಣತೆಯನ್ನು ಹೊಂದಬೇಕಾದರೆ ವಿವಿಧ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು, ವಿದ್ಯಾರ್ಥಿ ಮತ್ತು ಹೆತ್ತವರ ಮನೋಭಾವನೆಯನ್ನು ತಿಳಿದು ಬೋಧಿಸುವಂತಾಗಬೇಕು, ಪ್ರೀತಿ ಹಾಗೂ ನೀತಿಯಿಂದ ಕಲಿಸಿ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸುವ ಜವಾಬ್ದಾರಿ ಶಿಕ್ಷಕರಲ್ಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶೈಕ್ಷಣಿಕ ಸಂಯೋಜಕ ಶಿವಣ್ಣ ಬಾಯಾರ್, ಕನ್ನಡ ಮಾಧ್ಯಮದ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೃಪಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ ನಾಯ್ಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್ ವಂದಿಸಿದರು.
