ಕಾಪುವಿನಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಕಡೆಕಾರು- ಪಡುಕೆರೆ ಬಳಿ ಸಮುದ್ರದಲ್ಲಿ ಪತ್ತೆ
Thumbnail
ಕಾಪು : ಇಲ್ಲಿ ನಾಪತ್ತೆ ಆಗಿದ್ದ ಕಾಪು ಪಡುಗ್ರಾಮದ ಕರಣ್ ಸಾಲ್ಯಾನ್ (20) ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಪತ್ತೆಯಾಗಿದೆ. ಗುರುವಾರ ಸಂಜೆಯಿಂದ ನಾಪತ್ತೆ ಆಗಿದ್ದ ಕರಣ್ ಸಾಲ್ಯಾನ್ ರವರ ಬೈಕು, ಮೊಬೈಲ್ ಹಾಗೂ ಪರ್ಸ್ ಕಾಪು ಲೈಟ್ ಹೌಸ್ ಬಳಿಯ ಶ್ರೀಯಾನ್ ಸದನ ಮನೆಯ ಬಳಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿತ್ತು. ಈ ಬಗ್ಗೆ ತಂದೆ ತುಳಸಿ ಸಾಲ್ಯಾನ್‌ರವರು ಕಾಪು ಠಾಣೆಗೆ ನಾಪತ್ತೆ ದೂರು ಸಲ್ಲಿಸಿದ್ದರು. ಸ್ಥಳೀಯರು, ಈಜುಗಾರರು ಶುಕ್ರವಾರ ಬೆಳಗಿನಿಂದಲೇ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆ ಮಲ್ಪೆ ಬಳಿಯ ಪಡುಕೆರೆ ಕಡೆಕಾರು ಸಮುದ್ರದಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸ್ಥಳೀಯರು ಮೃತದೇಹವನ್ನು ಸಮುದ್ರದಿಂದ ಹೊರತೆಗೆದಿದ್ದಾರೆ. ಕರಣ್ ಕುಟುಂಬಿಕರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ. ಕಾಪುವಿನ ಸಮಾಜಸೇವಕ ಸೂರಿ ಶೆಟ್ಟಿಯವರು ಮೃತದೇಹವನ್ನು ಉಡುಪಿ ಅಜ್ಜರ ಕಾಡು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
07 Jun 2024, 06:56 PM
Category: Kaup
Tags: