ಶಿರ್ವ : ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಮಹಮ್ಮದ್‌ ಸಲೀಂ ನಿಧನ
Thumbnail
ಶಿರ್ವ : ತಾಲೂಕಿನ ಬೆಳ್ಳೆ ಕುಂತಳನಗರ ನಿವಾಸಿ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಯೋಧ ಮೊಹಮ್ಮದ್‌ ಸಲೀಂ (35) ಅವರು ಜೂನ್ 7ರಂದು ಅನಾರೋಗ್ಯದಿಂದ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಭಾರತೀಯ ಭೂ ಸೇನೆಯ 196 ಆರ್ಟಿ ರೆಜಿಮೆಂಟ್‌ನ ಜಮ್ಮು-ಕಾಶ್ಮೀರ, ದೆಹಲಿ ಮತ್ತು ಸಿಕಂದರಾಬಾದ್‌ನಲ್ಲಿ 14ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಹರ್ಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಹಾಗೂ ಪತ್ನಿ ಕಿಡ್ನಿ ದಾನ ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕಾಪು ತಹಶೀಲ್ದಾರ್‌ ಡಾ| ಪ್ರತಿಭಾ ಆರ್‌ ಅವರು ಶನಿವಾರ ಮೃತರ ನಿವಾಸಕ್ಕೆ ತೆರಳಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಬೆಳ್ಳೆ ಗ್ರಾಮ ಆಡಳಿತಾಧಿಕಾರಿ ಪ್ರದೀಪ್‌ ಕುಮಾರ್‌, ಬೆಳ್ಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಮೃತರ ಪತ್ನಿ, ತಂದೆ, ತಾಯಿ, ಸಹೋದರ ಯೋಧ ಮಹಮ್ಮದ್‌ ಬುಹ್ರಾಮ್‌ ಮೊದಲಾದವರು ಉಪಸ್ಥಿತರಿದ್ದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮಣಿಪುರ ಖಬರಸ್ತಾನದಲ್ಲಿ ಶನಿವಾರ ಸಕಲ ಸರಕಾರಿ ಗೌರವಗಳೊಂದಿಗೆ ಯೋಧ ಮಹಮ್ಮದ್‌ ಸಲೀಂ ಅವರ ಅಂತಿಮ ಸಂಸ್ಕಾರ ನಡೆಯಿತು.
08 Jun 2024, 08:22 PM
Category: Kaup
Tags: