ಕಾಪು : ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು - ದಿ. ಕಾಪು ಲೀಲಾಧರ ಶೆಟ್ಟಿ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ
ಕಾಪು : ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು ಇದರ ನೇತೃತ್ವದಲ್ಲಿ ದಿ. ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಜರಗಿತು.
ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಅವರು ಕಾಪು ಲೀಲಾಧರ ಶೆಟ್ಟಿಯವರು ಹಾಗೂ ಅವರ ಕೊಡುಗೆಗಳನ್ನು ಸ್ಮರಿಸಿ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ಶೈಕ್ಷಣಿಕ ವಿದ್ಯಾಭ್ಯಾಸ ಮಾತ್ರವಲ್ಲದೆ ಬದುಕಿನ ಮೌಲ್ಯವನ್ನು ತಿಳಿ ಹೇಳಿ, ಲೀಲಾಧರ ಶೆಟ್ಟಿ ಅವರ ಸಮಾಜ ಸೇವೆಯನ್ನು ಮಾದರಿಯಾಗಿ ಇಟ್ಟುಕೊಂಡು ಇಂದಿನ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕೆಂದು ಸಂದೇಶ ನೀಡಿದರು. ಶ್ರೀದೇವಿ ಫ್ರೆಂಡ್ಸ್ ಕಾರ್ಯಕ್ರಮವನ್ನು ಶ್ಲಾಘಿಸಿ, ಮುಂದೆಯೂ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ, ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಶುಭ ಹಾರೈಸಿದರು.
ಈ ಸಂದರ್ಭ ಮಾರಿಗುಡಿಯ ಗುರಿಕಾರರುಗಳಾದ ಶೇಖರ ರಾಣ್ಯ, ಎಂ. ಬಾಬು ರಾಣ್ಯ, ರಾಘು, ಸಮಾಜದ ಪ್ರಮುಖರಾದ ಬಿ ಕೆ ಶ್ರೀನಿವಾಸ, ಜಯ ರಾಣ್ಯ, ರವೀಂದ್ರ ಮಲ್ಲಾರ್, ಸಾಧು ರಾಣ್ಯ, ವಿಟ್ಟು, ರಾಣೆಯಾರು ಸಮಾಜ ಸೇವಾ ಸಂಘ ಕಾಪು ಇದರ ಅಧ್ಯಕ್ಷರಾದ ನಾಗಾರ್ಜುನ ಕಾಪು, ಶ್ರೀದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಸೂರಜ್, ಉಪಾಧ್ಯಕ್ಷೆ ರಮ್ಯ ಉಪಸ್ಥಿತರಿದ್ದರು.
ಸಾನ್ವಿತ್ ಪ್ರಾರ್ಥಿಸಿದರು. ಪ್ರಕಾಶ್ ಎಸ್ ನಿರೂಪಿಸಿದರು.
