ಸಾಂತೂರಿನಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ : ಇಬ್ಬರು ಪೋಲಿಸ್ ವಶ
ಸಾಂತೂರು : ಅನಾಹುತಕ್ಕೆ ಎಡೆಮಾಡುವ ರೀತಿಯಲ್ಲಿ ತುಂಬಿದ ಸಿಲಿಂಡರ್‌ಗಳಿಂದ ಗ್ಯಾಸನ್ನು ಖಾಲಿ ಸಿಲಿಂಡರ್‌ಗಳಿಗೆ ತುಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಗೋದಾಮಿಗೆ ದಾಳಿ ಮಾಡಿ ಪಡುಬಿದ್ರಿ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಕಾಪು ತಾಲೂಕಿನ ಸಾಂತೂರಿನಲ್ಲಿ ನಡೆದಿದೆ.
ಅಕ್ರಮವಾಗಿ ಸಿಲಿಂಡರ್ ಗಳಿಗೆ ಅನಿಲ ತುಂಬಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು, ತಹಶಿಲ್ದಾರರ ನಿರ್ದೇಶನದಂತೆ ಆಹಾರ ನಿರೀಕ್ಷಕರ ಜೊತೆಗೂಡಿ ಸಾಂತೂರಿನ ಸಮನ್ಯು ಗ್ಯಾಸ್ ಏಜೆನ್ಸಿ ಗೋದಾಮಿಗೆ ದಾಳಿ ಮಾಡಿ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ರಾಜಸ್ಥಾನ ಮೂಲದ ಸುರೇಂದ್ರ ಕುಮಾರ್ (25) ಹಾಗೂ ಸುಖ್ ದೇವ್(23) ಎಂದು ಗುರುತಿಸಲಾಗಿದೆ. ಉಳಿದಂತೆ ರಾಜಸ್ಥಾನದ ದೇವರಾಮ್ ಹಾಗೂ ಗ್ಯಾಸ್ ಏಜೆನ್ಸಿ ಮಾಲಕಿಯನ್ನು ಇನ್ನಷ್ಟೆ ವಶಕ್ಕೆ ಪಡೆಯ ಬೇಕಾಗಿದೆ.
ಅಂದಾಜು ರೂ.55 ಸಾವಿರ ಮೌಲ್ಯದ 15 ಸಿಲಿಂಡರ್ ಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡಲು ಬಳಸುವ ಪರಿಕರ, ಲೇಬಲ್‌ಗಳು, ರೂ.15,460 ನಗದು, ಮೊಬೈಲ್‌ಫೋನ್‌ಗಳನ್ನು ವಶಪಡಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
