ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ
ಕಾಪು : ರಕ್ಷಕ-ಶಿಕ್ಷಕ ಸಂಘವು ವಿದ್ಯಾಸಂಸ್ಥೆಯ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಹೆತ್ತವರಾದ ತಾವು ಮಕ್ಕಳಲ್ಲಿ ಶಿಸ್ತನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದೀರಿ. ಪಾಠದ ಜೊತೆಗೆ ಇತರ ವಿಷಯಗಳ ಕಲಿಕೆಗೆ ಪ್ರೋತ್ಸಾಹಿಸುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಇಂತಹ ಸಹಕಾರವನ್ನು ನೀಡಿ ಎಂದು ದಂಡತೀರ್ಥ ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ. ಕೆ. ಪ್ರಶಾಂತ್ ಶೆಟ್ಟಿ ಹೇಳಿದರು.
ಅವರು ಶನಿವಾರ ಶಾಲಾ ಸಭಾಂಗಣದಲ್ಲಿ ಜರಗಿದ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನ್ಹಸ್ ಹೆತ್ತವರನ್ನು ಉದ್ದೇಶಿಸಿ ಮಾತನಾಡಿದರು.
ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿದ್ಯಾಸಂಸ್ಥೆಯ ಶೈಕ್ಷಣಿಕ ಸಂಯೋಜಕರಾದ ಶಿವಣ್ಣ ಬಾಯಾರ್ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಿದರು.
ಸಭೆಯಲ್ಲಿ ರಕ್ಷಕ-ಶಿಕ್ಷಕ ಸಂಘಕ್ಕೆ ಆಯ್ಕೆಯಾದ ಪ್ರೌಢ ಮತ್ತು ಕಾಲೇಜು ವಿಭಾಗದ ಅಧ್ಯಕ್ಷೆ ಮಂಜುಳ ಶೆಟ್ಟಿ ಮತ್ತು ಪ್ರಾಥಮಿಕ ವಿಭಾಗದ ಅಧ್ಯಕ್ಷೆ ಸ್ವಾತಿ, ಆಡಳಿತಾಧಿಕಾರಿಯಾದ ಆಲ್ಬನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ನೀಲಾನಂದ್ ನಾಯ್ಕ್ ಸ್ವಾಗತಿಸಿ, ಫಲಿತಾಂಶ ವಿಶ್ಲೇಷಣೆ ಹಾಗೂ ವರದಿಯನ್ನು ವಾಚಿಸಿದರು. ಸಂಘದ ಲೆಕ್ಕಪತ್ರವನ್ನು ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ಮಂಡಿಸಿದರು. ಉಪನ್ಯಾಸಕಿ ಸುಷ್ಮಾ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಉದಯಕುಮಾರ್ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ ಶೆಟ್ಟಿ ವಂದಿಸಿದರು.
