ಪಡುಬಿದ್ರಿ : ಎಸ್ ಬಿ ವಿ ಪಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿ ಪ್ರೌಢಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ
Thumbnail
ಪಡುಬಿದ್ರಿ : ಪರಿಸರದ ಶುದ್ಧತೆ ಮತ್ತು ಉತ್ತಮ ಆರೋಗ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಮಾಹಿತಿ ಕಾರ್ಯಕ್ರಮವು ಪಡುಬಿದ್ರಿ ಗಣಪತಿ ಪ್ರೌಢಶಾಲೆ ಮತ್ತು ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಡೆಯಿತು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿನಯಾ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಡೆಂಗ್ಯೂ , ಮಲೇರಿಯಾ , ಚಿಕನ್ ಗುನ್ಯಾ , ಇಲಿ ಜ್ವರ ಮೊದಲಾದ ರೋಗಗಳು ಮಳೆಗಾಲದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಮನೆಯ ಸುತ್ತ ಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ, ಮಳೆಯ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ರೋಗದ ಲಕ್ಷಣಗಳು ಕಂಡು ಬಂದರೆ, ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ಪ್ರೌಢಶಾಲೆಯ ಅಧ್ಯಾಪಕರಾದ ಡಾ. ರಾಘವೇಂದ್ರ ರಾವ್ ಅವರು ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಎಲ್ಲ ಬಗೆಯ ಆರೋಗ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕುಟುಂಬದ ಸದಸ್ಯರಿಗೂ, ಪರಿಸರದ ಜನರಿಗೂ ಈ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಅಶೋಕ ಕೆ., ಆಶಾ ಕಾರ್ಯಕರ್ತೆ ರಜನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಶಿಲ್ಪಾ ಕೆ.ಆರ್. ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲೆಯ ಶಿಕ್ಷಕಿ ಕುಮಾರಿ ಪ್ರತೀಕ್ಷಾ ವಂದಿಸಿದರು. ಉಭಯ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
12 Jul 2024, 07:56 PM
Category: Kaup
Tags: