ಯುವವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು : ರಜತ ಸಂಭ್ರಮ - ವನಮಹೋತ್ಸವ ಕಾರ್ಯಕ್ರಮ
Thumbnail
ಉಡುಪಿ : ಯುವವಿಚಾರ ವೇದಿಕೆ (ರಿ.) ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮದ ಎರಡನೇ ಕಾರ್ಯಕ್ರಮವಾದ ವನಮಹೋತ್ಸವವು ಜರಗಿತು. ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಇದರ ಮಾಲಕರು, ಜಯಂಟ್ಸ್ ಗ್ರೂಪ್ ನ ಸಂಚಾಲಕರಾಗಿರುವ ಮಧುಸೂಧನ್ ಹೇರೂರು ಇವರು ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹಸಿರೇ ಉಸಿರು ಅದಕ್ಕಾಗಿ ಗಿಡ ನೆಟ್ಟು ಪಾಲಿಸಿ ಪೋಷಿಸಿ ಹಾಗೂ ಸಂರಕ್ಷಿಸಿ, ಪ್ರತಿಯೊಂದು ಗಿಡಗಳಿಗೂ ದೈವೀಕ ಶಕ್ತಿ ಇದ್ದು ಗಿಡಗಳೊಂದಿಗೆ ನಾವಿದ್ದಾಗ ಮಾತ್ರ ಆಯಾ ಶಕ್ತಿಗಳ ಸಂಚಲನ ಸಾಧ್ಯ ಎಂದು ತಿಳಿಸಿದರು. ಭವಿಷ್ಯದ ಬದುಕಿಗೆ ವೃಕ್ಷ ಬೆಳೆಸುವ ಸಂಕಲ್ಪದೊಂದಿಗೆ ಗಿಡ ನೆಡುವ ಮತ್ತು ಗಿಡ ವಿತರಣಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸಹಭಾಗಿತ್ವ ಬ್ರಹ್ಮಾವರದ ಸುವರ್ಣ ಎಂಟರ್ಪ್ರೈಸಸ್ ವಹಿಸಿದ್ದು, ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಉಪ್ಪೂರು ವ್ಯ. ಸೇ. ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಜಯಕರ್ ಆಚಾರ್ ಮುಟ್ಟಿಕಲ್, ಸ್ಪಂದನ ವಿಶೇಷ ಚೇತನ ಸಂಸ್ಥೆಯ ಜನಾರ್ಧನ್ ಗಿಡ ನೆಟ್ಟು ಶುಭ ಹಾರೈಸಿದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
22 Jul 2024, 06:53 AM
Category: Kaup
Tags: