ಪಡುಬಿದ್ರಿ : ಕಡಲಬ್ಬರಕ್ಕೆ ಸಿಲುಕಿದ ಮೀನುಗಾರರ ವಿಶ್ರಾಂತಿ ಗೃಹ, ತೆಂಗಿನಮರಗಳು
Thumbnail
ಪಡುಬಿದ್ರಿ : ಇಲ್ಲಿನ ಕಡಲ ಕಿನಾರೆಯ ನಡಿಪಟ್ಣ ಪ್ರದೇಶದಲ್ಲಿ ಮೀನುಗಾರರ ವಿಶ್ರಾಂತಿ ಗೃಹ, ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಕಡಲ ಅಲೆಗಳ ಅಪ್ಪಳಿಸುವಿಕೆ ಹೆಚ್ಚಾಗುತ್ತಿದ್ದು ನಡಿಪಟ್ಣ ವಿಷ್ಣು ಭಜನಾ ಮಂದಿರ ಸಮೀಪದ ಮೀನುಗಾರರ ವಿಶ್ರಾಂತಿ ಗೃಹ ಪತನಗೊಂಡಿದೆ. ಇದರ ಜೊತೆಗೆ ಕೆಲವೊಂದು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಇತ್ತೀಚಿಗೆ ಇಲ್ಲಿಗೆ ಸಮೀಪದ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕಾ ಶೆಡ್ ಗೂ ಹಾನಿಯಾಗಿ, ಸಮೀಪದ ತೆಂಗಿನ ಮರಗಳು ಸಮುದ್ರ ಪಾಲಾಗಿತ್ತು. ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಸಹಿತ ಜಿಲ್ಲಾಧಿಕಾರಿ, ತಹಶಿಲ್ದಾರ್ ಭೇಟಿ ನೀಡಿ, ತಾತ್ಕಾಲಿಕ ಪರಿಹಾರ ಎಂಬಂತೆ ತಡೆಕಲ್ಲುಗಳನ್ನು ಹಾಕುವ ಪ್ರಕ್ರಿಯೆ ಶುರುವಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ವಿಷ್ಣು ಭಜನಾ ಮಂದಿರದ ಸಮೀಪದ ಕಡಲ್ಕೊರೆತದ ಮುನ್ಸೂಚನೆ ನೀಡಿದ್ದರು. ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಭರವಸೆಯಾಗಿ ಉಳಿದು ಈ ಭಾಗದ ಜನರು ಭಯದಿಂದ ಇರುವಂತಾಗಿದೆ. ಈ ಭಾಗದಲ್ಲಿ ತಕ್ಷಣ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಬಂದು ನೋಡಿ ಭರವಸೆ ನೀಡುವುದು ನಮಗೆ ಬೇಕಿಲ್ಲ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
25 Jul 2024, 06:00 PM
Category: Kaup
Tags: