ಪಡುಬಿದ್ರಿ : ಪತ್ರಿಕಾ ದಿನಾಚರಣೆ, ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿನಿಧಿ ವಿತರಣೆ
Thumbnail
ಪಡುಬಿದ್ರಿ : ಪತ್ರಕರ್ತರು ನಿರ್ಭೀತ ವರದಿ ಮಾಡುವ ಎದೆಗಾರಿಕೆ ಹಾಗೂ ನ್ಯಾಯ ನಿಷ್ಟುರವಾಗಿ ಸಮಾಜಮುಖಿ ಚಿಂತನೆಗಳನ್ನು ಮಂಡಿಸುವ ಗುಣಗಳನ್ನು ಹೊಂದಿರಬೇಕು ಎಂದು ತುಳು ಜಾನಪದ ಸಂಶೋಧಕ ಡಾ.ವೈ. ಎನ್. ಶೆಟ್ಟಿ ಹೇಳಿದರು. ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪಡುಬಿದ್ರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಪತ್ರಿಕಾ ದಿನಚರಣೆ ಹಾಗೂ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ- ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಿ ಉಪನ್ಯಾಸಗೈದರು. ಪತ್ರಕರ್ತರಲ್ಲಿ ಹಲವಾರು ಮಂದಿ ಆದರ್ಶ ವ್ಯಕ್ತಿತ್ವದವರಿದ್ದಾರೆ. ಈ ಪೈಕಿ ಹಿರಿಯ ಪತ್ರಕರ್ತ ದಿ. ಜಯಂತ್ ಅವರನ್ನು ಪರಿಗಣಿಸಬಹುದು ಎಂದು ಅವರು ನುಡಿದರು. ಪತ್ರಕರ್ತ ಜಯಂತ್ ಪಡುಬಿದ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಸ್ಮರಣೆಗೈಯಲಾಯಿತು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂರು ವಿವಿಧ ದಿನಪತ್ರಿಕೆಗಳನ್ನು ಮತ್ತು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕಸಪಾ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ನೀಡಿದ್ದ 120 ಸಾಹಿತ್ಯಿಕ ಕೃತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತ ಜಯಂತ್ ಪಡುಬಿದ್ರಿ ದತ್ತಿನಿಧಿಯನ್ನು ಕಾಲೇಜಿನ 12 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ತನ್ನ ಆಧುನಿಕತೆಗೆ ತಕ್ಕಂತೆ ವಿವಿಧ ರೂಪಗಳನ್ನು ಪಡೆದುಕೊಂಡಿದೆ. ಮಾದ್ಯಮ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಅಜಯ್ ಕುಮಾರ್ ಎಸ್, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಗೀತಾ ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ ಉಪಸ್ಥಿತರಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪುಂಡಲೀಕ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ್ ಕುಂಜೂರು ವಂದಿಸಿದರು.
Additional image
25 Jul 2024, 07:28 PM
Category: Kaup
Tags: