ಎರ್ಮಾಳು : ಕಂಡೊಡೊಂಜಿ ದಿನ ಕಾರ್ಯಕ್ರಮ
ಎರ್ಮಾಳು : ತುಳುನಾಡಿನ ಜನರು ಆಟಿ ತಿಂಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಸಂತಸದ ವಿಷಯ. ಇದು ತುಳುವರ ಸಂಸ್ಕೃತಿಯ ಬಗೆಗಿನ ಕಾಳಜಿ ತೋರಿಸುತ್ತದೆ ಎಂದು ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗ ಅವರು ಹೇಳಿದರು.
ಅವರು ಬಿಲ್ಲವರ ಯೂನಿಯನ್ ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳು ಬಡಾ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ ಮತ್ತು ಬೈದಶ್ರೀ ಮಹಿಳಾ ಮಂಡಳಿ ಎರ್ಮಾಳು ಬಡಾ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ರವಿವಾರ ಜರಗಿದ ಕಂಡೊಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ನಿತ್ಯಾನಂದ ಶೆಟ್ಟಿ ಎರ್ಮಾಳು ಬಡಾ ಮಾತನಾಡಿ, ಯಾವುದೇ ಕಾರ್ಯಕ್ರಮಗಳನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಸಂಘಟನೆಗಳ ಕರ್ತವ್ಯ. ಇಂತಹ ಕಾರ್ಯಕ್ರಮಗಳ ಮೂಲಕ ಕೃಷಿಯ ಮಹತ್ವವನ್ನೂ ಯುವ ಜನಾಂಗಕ್ಕೆ ಮನವರಿಕೆ ಮಾಡಬೇಕಾಗಿದೆ ಎಂದರು.
ಬಿಲ್ಲವರ ಯೂನಿಯನ್ ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಸುಖೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಬೈದರ್ಕಳ ದರ್ಶನ ಪಾತ್ರಿ ರವಿ ಪೂಜಾರಿ ಕುರ್ಕಾಲು, ಎರ್ಮಾಳು ಶ್ರೀ ನಂದಿಕೇಶ್ವರ ದೇವಸ್ಥಾನದ ಅರ್ಚಕ ಬಾಲಕೃಷ್ಣ ಭಟ್, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆಯ ಅಧ್ಯಕ್ಷ ಸತೀಶ್ ಪೂಜಾರಿ, ಎರ್ಮಾಳು ಬಡಾ ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸಬಿತ ಸೋಮನಾಥ, ಆಡಳಿತ ಸಮಿತಿ ಕಾರ್ಯದರ್ಶಿ ರಮೇಶ್ ಅಂಚನ್, ಹಿರಿಯರಾದ ಶಂಕರ ಪೂಜಾರಿ, ಉದ್ಯಮಿ ಕರುಣಾಕರ ಪೂಜಾರಿ, ಪತ್ರಕರ್ತ ಬಾಲಕೃಷ್ಣ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.
ಮನೋಹರ್ ಉಚ್ಚಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
