ಇಂದು (ಆಗಸ್ಟ್ 1) ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ
Thumbnail
ಪಡುಬಿದ್ರಿ : ಕಾನನದ ನಡುವಿನ ದೈವಿಕ ತಾಣ, ಮರಳೇ ಪ್ರಸಾದವಾಗಿ ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರೂ ನೆಲದ ಮೇಲೆಯೇ ಕುಳಿತುಕೊಂಡು ಭಕ್ತಿ ಪರವಶವಾಗುವ ಕ್ಷೇತ್ರವೇ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನ. ಎರಡು ವರ್ಷಕ್ಕೊಮ್ಮೆ ನಡೆಯುವ ಢಕ್ಕೆಬಲಿ ಸೇವೆ ವಿಶೇಷವಾಗಿದೆ. ಶ್ರೀ ಕ್ಷೇತ್ರದಲ್ಲಿ ಭಕ್ತ ಜನರು ಪಂಚಾಮೃತ ಸೇವೆ, ಹಗಲು ತಂಬಿಲ,ರಾತ್ರಿ ತಂಬಿಲ ಸೇವೆ ಸಲ್ಲಿಸಲು ಅವಕಾಶವಿದೆ. ಕರ್ಕಾಟಕ (ಆಟಿ) ಮಾಸದಲ್ಲಿ ಈ ಸೇವೆಗಳು ನಡೆಯದಿದ್ದರೂ, ಈ ತಿಂಗಳ 16 ನೇ ದಿನದಂದು ನಡೆಯುವ ಅಜಕಾಯಿ ಸೇವೆ ಪ್ರಮುಖವಾಗಿದೆ. ಅಜಕಾಯಿ ಸೇವೆಯ ಮುನ್ನ ಕ್ಷೇತ್ರದಲ್ಲಿಯ ಮರಳನ್ನು ಬದಲಾಯಿಸಲಾಗುತ್ತದೆ. ಕ್ಷೇತ್ರದ ದೇವರ ಸೇವಕರು ಸಮುದ್ರದೆಡೆಗೆ ಸಾಗಿ ಅಲ್ಲಿ ಮಿಂದು, ಸೊಂಟಮಟ್ಟದ ಸಮುದ್ರದ ನೀರಿನಿಂದ ತೆಗೆಯಲಾಗುವ ಮರಳನ್ನು ಶ್ರೀ ಖಡೇಶ್ವರೀ ಬ್ರಹ್ಮಸ್ಥಾನಕ್ಕೆ ತಂದು ಸಾನಿಧ್ಯದಲ್ಲಿ ಹರಡುತ್ತಾರೆ. ನಂತರ ನಾಗ ದೇವರಿಗೆ ಎಳನೀರಿನ ಅಭಿಷೇಕ, ಅಲಂಕಾರ ನಡೆಯುತ್ತದೆ. ನಂತರ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ದೇವರಲ್ಲಿ ಪ್ರಾರ್ಥಿಸಿ ತೆಂಗಿನಕಾಯಿಯನ್ನು ಸಮರ್ಪಿಸಿದ ಬಳಿಕ ಭಕ್ತ ಜನರಿಂದ ಬಂದ ಸಾವಿರಾರು ಕಾಯಿಗಳನ್ನು ಅಜಕಾಯಿ ಕಲ್ಲಿಗೆ ಕ್ಷೇತ್ರದ ಪಾತ್ರಿಗಳು ಒಡೆಯುತ್ತಾರೆ. ನಂತರ ಭಕ್ತರಿಗೆ ಪ್ರಸಾದ ರೂಪವಾಗಿ‌ ಹಂಚಲಾಗುತ್ತದೆ. ಈ ದಿನ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಯ ಭಕ್ತರು ಸುಮಾರು 10 ಸಾವಿರಕ್ಕೂ ಅಧಿಕ ತೆಂಗಿನಕಾಯಿ, ಎಳನೀರು ಸಮರ್ಪಿಸುತ್ತಾರೆ.
01 Aug 2024, 12:55 PM
Category: Kaup
Tags: