ಪಡುಬಿದ್ರಿ : ಅದಾನಿ ಫೌಂಡೇಶನ್ ವತಿಯಿಂದ ರೂ.60 ಲಕ್ಷ ಮೌಲ್ಯದ ಶಿಕ್ಷಣ ಪರಿಕರಗಳ ವಿತರಣೆ
ಪಡುಬಿದ್ರಿ : ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಸ್ಥಾವರದ ಆಸುಪಾಸಿನ ಕನ್ನಡ ಮಾಧ್ಯಮದ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ ಎಸ್ ಆರ್ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ರೂ. 60 ಲಕ್ಷ ಮೊತ್ತದ ಶಿಕ್ಷಣ ಪರಿಕರಗಳನ್ನು 76 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 6,800 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದು ಅದಾನಿ ಫೌಂಡೇಷನ್ ಅಧ್ಯಕ್ಷರಾದ ಕಿಶೋರ್ ಆಳ್ವ ಹೇಳಿದರು.
ಅವರು ಪಡುಬಿದ್ರಿ ಬಂಟರ ಸಂಘದಲ್ಲಿ ಅದಾನಿ ಸಂಸ್ಥೆಯ ವತಿಯಿಂದ ಸ್ಥಾವರದ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ಪರಿಕರ ವಿತರಿಸಿ ಮಾತನಾಡಿದರು.
ಪ್ರತಿ ವಾರ್ಷಿಕ ಸಾಲಿನ ಅದಾನಿ ಸಿಎಸ್‌ಆರ್ ಅನುದಾನದಲ್ಲಿ ಶೇ. 20ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಯೋಜಿಸುತ್ತಿದೆ. ಅದಾನಿ ಸಂಸ್ಥೆಯು ಕರಾವಳಿ ಪ್ರದೇಶದಲ್ಲಿ ಉಡುಪಿ ಉಷ್ಣ
ವಿದ್ಯುತ್ ಸ್ಥಾವರದ ಜೊತೆಗೆ ಮಂಗಳೂರಿನ ವಿಮಾನ ನಿಲ್ದಾಣ, ಗ್ಯಾಸ್ ಪೈಪ್‌ಲೈನ್ ಯೋಜನೆ, ಸಿಮೆಂಟ್ ಕೈಗಾರಿಕಾ ಘಟಕದ ವಿಸ್ತರಣೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಸ್ಥಳೀಯರಿಗೆ
ಉದ್ಯೋಗವಕಾಶ ಹಾಗೂ ಅನೇಕ ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ.
ದೇವಿಪ್ರಸಾದ್ ಶೆಟ್ಟಿಯವರು ಮಾತನಾಡಿ ಅದಾನಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಸುಮಾರು ಒಂದು ದಶಕದಿಂದ ಹಲವಾರು ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ನೆರೆ ಗ್ರಾಮಗಳಲ್ಲಿ ಹಮ್ಮಿಕೊಂಡು ಬರುತ್ತಿದ್ದು ಪಂಚಾಯತ್ ಹಾಗೂ ಗ್ರಾಮಸ್ಥರ ವಿಶ್ವಾಸವನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾಪು ತಾಲೂಕಿನ ಯುವಜನ ಕ್ರೀಡಾಧಿಕಾರಿಯಾದ ರಿತೇಶ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾರವರು ಮಾತನಾಡಿದರು.
ವೇದಿಕೆಯಲ್ಲಿ ಸ್ಥಾವರದ ಆಸುಪಾಸಿನ ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು, ಅದಾನಿ ಫೌಂಡೇಶನ್ ಸಂಸ್ಥೆಯ
ಅನುದೀಪ್, ಧೀರಜ್, ಶುಭಮಂಗಳ ಉಪಸ್ಥಿತರಿದ್ದರು.
ಅದಾನಿ ಸಮೂಹದ ಅಸೋಸಿಯೇಟ್ ಜನರಲ್ ಮ್ಯಾನೇಜರ್ ರವಿ ಆರ್. ಜೇರೆ ಸ್ವಾಗತಿಸಿದರು. ಶಿಕ್ಷಕ ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
