ಕಾಪು - ಶಂಕರಪುರ - ಬಂಟಕಲ್ಲು ಕೂಡುವ ರಸ್ತೆ ಮಡುಂಬು : ಯುವಕರಿಂದಲೇ ದುರಸ್ತಿ ಕಾರ್ಯ
ಕಾಪು : ತಾಲೂಕಿನ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡುಂಬು ಇಲ್ಲಿನ ಹೃದಯ ಭಾಗವಾಗಿ ಗುರುತಿಸಿಕೊಂಡಿರುವ ಬೆರ್ಮೊಟ್ಟು ಬಳಿಯ ಮಡುಂಬು ಮೂರು ರಸ್ತೆಯು ಕಳೆದ ಕೆಲವು ತಿಂಗಳಿನಿಂದ ಪೈಪ್ ಲೈನ್ ಗಾಗಿ ಗುಂಡಿ ತೋಡುವ ಭರದಲ್ಲಿ ಈ ಭಾಗದಲ್ಲಿ ಸಂಚರಿಸುವವರಿಗೆ ಅಪಾಯಕಾರಿ ತಿರುವಿನ ರಸ್ತೆಯಾಗಿ ಪರಿಣಮಿಸಿತ್ತು. ಮಳೆಗಾಲದಲ್ಲಿ ರಸ್ತೆಯ ಮೇಲಿನ ಮಣ್ಣು ಮತ್ತು ಹೊಂಡದಿಂದಾಗಿ ನೀರು ನಿಲ್ಲುತ್ತಿದ್ದು ಇದಕ್ಕಾಗಿ ಪಿ. ಡಬ್ಲ್ಯೂ.ಡಿ ಕಾಂಟ್ರಾಕ್ಟರ್, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಕಂಡು ಇಲ್ಲಿನ ಸ್ಥಳೀಯ ಯುವಕರ ತಂಡವೊಂದು ದುರಸ್ತಿ ಕಾರ್ಯವನ್ನು ಮಾಡಿದೆ.
ಮಳೆಗಾಲ ಮುಗಿಯುವ ಮುನ್ನವೇ ಈ ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಿರುವುದರಿಂದ ಈ ಭಾಗದಲ್ಲಿ ಚಲಿಸುವ ವಾಹನ ಸವಾರರಿಗೆ ಕೊಂಚ ಮಟ್ಟಿನ ಸಮಾಧಾನ ಉಂಟಾಗಿದೆ.
ಪೈಪ್ ಲೈನ್ ಅಳವಡಿಸಿರುವವರು ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಬೇಕಾಗಿದ್ದು, ಅವರು ಇಲ್ಲದಿದ್ದಲ್ಲಿ ಪಿ. ಡಬ್ಲ್ಯೂ. ಡಿ ಗುತ್ತಿಗೆದಾರರು ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದ್ದು ಎಲ್ಲರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಇದ್ದಾರೆ.
ನಾವ್ಯಾರಿಗೂ ಕಾಯುವುದು ಬೇಡ ನಮ್ಮೂರಿನ ರಸ್ತೆಯ ದುರಸ್ತಿ ನಾವೇ ಮಾಡೋಣ ಎಂದು ಯುವಕರೇ ಫೀಲ್ಡಿಗೆ ಇಳಿದಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದಿರುವ ಅಲ್ಪ ಸ್ವಲ್ಪ ಕೆಲಸವನ್ನಾದರೂ ಮಾಡಲಿ ಎಂದು ಯುವಕರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.
