ಪಡುಬಿದ್ರಿ : ಕಂಚಿನಡ್ಕ ಬಳಿ ಟೋಲ್ ನಿರ್ಮಾಣ - ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ
ಪಡುಬಿದ್ರಿ : ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಬಳಿ ಟೋಲ್ ಬೂತ್ ನಿರ್ಮಾಣದ ಬಗ್ಗೆ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಟೋಲ್ ವಿರೋಧಿ ಹೋರಾಟ ಸಮಿತಿಯವರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.
ಸ್ಥಳ ಪರಿಶೀಲನೆಗಾಗಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಎಕ್ಸಿಕ್ಯೂಟಿವ್ ಎಂಜಿನಿಯರ್ ರಘು ಎಲ್ ಹಾಗೂ ಸಹಾಯಕ ಎಂಜಿನಿಯರ್ ಹೇಮಂತ್ ಕುಮಾರ್ ಆಗಮಿಸಿದ್ದರು. ಅಧಿಕಾರಗಳು ಸ್ಥಳಕ್ಕೆ ಬರುವ ಸುದ್ದಿ ತಿಳಿದು ಸ್ಥಳದಲ್ಲಿ ಟೋಲ್ ವಿರೋಧಿ ಹೋರಾಟಗಾರರು ಸ್ಥಳದಲ್ಲಿ ಜಮಾಯಿಸಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಟೋಲ್‌ವಿರೋಧಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಹೊತ್ತು ಪರಿಸ್ಥಿತಿ ಬಿಗಡಾಯಿಸಿದಾಗ ಪೋಲಿಸರ ಮಧ್ಯ ಪ್ರವೇಶದಿಂದ ತಿಳಿಯಾಗಿ ಬಳಿಕ ಮಾಹಿತಿ ನೀಡಲು ಮುಂದಾದಾಗ ಟೋಲ್ ವಿರೋಧಿ ಹೋರಾಟಗಾರರು ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು.
ಟೋಲ್ ವಿರೋಧ ಹೋರಾಟ ಸಮಿತಿಯ ಸುಹಾಸ್ ಹೆಗ್ಡೆ ಮಾತನಾಡಿ ಟೋಲ್‌ನಿರ್ಮಾಣ ಪ್ರಸ್ತಾವನೆ ಇಲ್ಲಿಗೆ ಕೈಬಿಡಬೇಕು ಎಂದು ಒತ್ತಾಯಿಸಿ ಐದು ದಿನಗಳ ಒಳಗಾಗಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗುವುದು ಎಂದರು.
