ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಮತ್ಸ್ಯಗಂಧ ನಿಲುಗಡೆಗೆ ರೈಲ್ವೆ ಸಚಿವರಿಗೆ ಕಾಪು ಶಾಸಕರಿಂದ ಮನವಿ
ಕಾಪು : ಪಡುಬಿದ್ರಿ - ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಗುರುವಾರ ಸಂಜೆ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣನವರಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ ಸಲ್ಲಿದರು.
ಕಾಪು ಮಂಥನ ಬೀಚ್ ರಿಸಾರ್ಟ್‌ಗೆ ಔಪಚಾರಿಕ ಭೇಟಿ ಸಂದರ್ಭ ಮನವಿ ನೀಡಿದರು.
ಮನವಿಯಲ್ಲಿ, ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಣಿಯೂರು ಗ್ರಾಮದಲ್ಲಿರುವ ಪಡುಬಿದ್ರಿ ರೈಲ್ವೆ ನಿಲ್ದಾಣದಲ್ಲಿ ಮಂಗಳೂರು ಕುರ್ಲಾ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ರೈಲ್ವೆ ನಿಲುಗಡೆಗೆ ಅವಕಾಶ ನೀಡಬೇಕು.
ಉಚ್ಚಿಲ ಗ್ರಾಮವು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ತೆಂಕ, ಬೆಳಪು, ಶಿರ್ವ, ಮುದರಂಗಡಿ ಹಾಗೂ ಕಾರ್ಕಳದ ಕಡೆಯಿಂದ ನೂರಾರು ಜನರು ಮಂಬಯಿಗೆ ಪ್ರವಾಸ ಬೆಳೆಸಲು, ದೂರದ ಉಡುಪಿ ಅಥವಾ ಮೂಲ್ಕಿ ನಿಲ್ದಾಣಕ್ಕೆ ಹೋಗಬೇಕಿದೆ. ಮುಂಬಯಿಯಿಂದ ಪ್ರಯಾಣಿಸುವರಿಗೆ ಪಡುಬಿದ್ರಿ - ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೊಂಡರೆ ಸಹಕಾರಿ ಆಗಲಿದೆ. ತಾವು ಪಡುಬಿದ್ರೆ ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ ಮತ್ಸ್ಯಗಂಧ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವಲ್ಲಿ ಸೂಕ್ತ ಕ್ರಮ ವಹಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಪುರಸಭಾ ಸದಸ್ಯರಾದ ಹರಿಣಾಕ್ಷಿ, ಶೈಲೇಶ್, ರತ್ನಾಕರ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ರೈತ ಮೋರ್ಚಾದ ಕೃಷ್ಣ ರಾವ್, ಹರೀಶ್ ಶೆಟ್ಟಿ ಗುರ್ಮೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
