ಪಡುಬಿದ್ರಿಯ ಕಂಚಿನಡ್ಕ ಟೋಲ್ ಗೇಟ್ : ನಾನು ಕೊಟ್ಟ ಮಾತನ್ನು ಎಂದೂ ತಪ್ಪಿದವಳಲ್ಲ - ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
ಪಡುಬಿದ್ರಿ : ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕ ಬಳಿ ನಿರ್ಮಿಸಲು ಮುಂದಾಗಿರುವ ಟೋಲ್ ಗೇಟ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಗುರುವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಸ್ಥಳೀಯರ ವಿರೋಧದ ನಡುವೆ ಟೋಲ್ ಗೇಟ್ ನಿರ್ಮಿಸುವುದು ಸರಿಯಲ್ಲ. ದಿನಂಪ್ರತಿ ಓಡಾಡುವ ರಸ್ತೆಗೆ ಎರಡೆರಡು ಬಾರಿ ಟೋಲ್ ಶುಲ್ಕ ಕಟ್ಟಲು ಸಾಧ್ಯವಿಲ್ಲ. ಈ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ನಾನು ಕೊಟ್ಟ ಮಾತನ್ನು ಎಂದೂ ತಪ್ಪಿದವಳಲ್ಲ. ಕಳೆದ ತಿಂಗಳು ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕಾಲೇಜಿನ ರದ್ದತಿ ಆದೇಶವನ್ನು ವಾಪಸ್ ಪಡೆಯಲಾಗಿದೆ. ಕೊಟ್ಟ ಮಾತಿನಂತೆ ನಡೆದ ಫಲವಾಗಿ ಇಂದು ನೌಕರರು ನೆಮ್ಮದಿಯಿಂದ ಇದ್ದಾರೆ. ಈಗ ಟೋಲ್ ಗೇಟ್ ವಿಚಾರದಲ್ಲಿ ಜನರ ಪರ ಇರುವೆ ಎಂದು ಸಚಿವರು ತಿಳಿಸಿದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಆಗಸ್ಟ್ 24ರ ಸಾರ್ವಜನಿಕ ಪ್ರತಿಭಟನೆಯ ಕಾವು ಏರುತ್ತಿದೆ. ಪಡುಬಿದ್ರಿಯಿಂದ ಕಾರ್ಕಳದವರೆಗೂ ಇರುವ ಸುಮಾರು 40 ಗ್ರಾಮಗಳ ಜನತೆಗೆ ಕಬ್ಬಿಣದ ಕಡಲೆಯಾಗಬಲ್ಲ ಕಂಚಿನಡ್ಕ ಟೋಲ್‌ಗೇಟ್ ತಮಗೆ ಬೇಡವೇ ಬೇಡ ಎಂದರು.
ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಅವರು ಮಾತನಾಡಿ, ನಾವು ಪ್ರಸ್ತಾವಿತ ಟೋಲ್‌ಗೇಟ್‌ಗೆ ಸಂಪೂರ್ಣ ವಿರೋಧ ವ್ಯಕ್ತ ಪಡಿಸುತ್ತೇವೆ ಎಂದರು.
ಸಮಿತಿಯು ಸಿದ್ಧಪಡಿಸಿದ ಈ ಕುರಿತಾದ ಮನವಿಯೊಂದನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಸಂದರ್ಭ ಅವರಿಗೆ ನೀಡಲಾಯಿತು
ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಅರುಣ್ ಕುಮಾರ್, ಉಡುಪಿ ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ನೂರಾರು ಮಂದಿ ಪ್ರತಿಭಟನಾಕಾರು ಉಪಸ್ಥಿತರಿದ್ದರು.
ಸರ್ವಜ್ಞ ತಂತ್ರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
