ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ : ವಿಶ್ವ ಛಾಯಾಗ್ರಹಣ ದಿನಾಚರಣೆ
ಕಾಪು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದ.ಕ - ಉಡುಪಿ ಜಿಲ್ಲೆ ಇದರ ಕಾಪು ವಲಯದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸೋಮವಾರ ಕೆ1 ಹೋಟೆಲ್ ನ ಸಭಾಭವನದಲ್ಲಿ ಆಚರಿಸಲಾಯಿತು.
ಸನ್ಮಾನ : ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಬಾಲಕೃಷ್ಣ ಪೂಜಾರಿ ಉಚ್ಚಿಲ ಮತ್ತು ಛಾಯಾಗ್ರಾಹಕ ಪ್ರಭಾಕರ ದೇವಾಡಿಗರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಇಂದಿನ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರ ಪರಿಸ್ಥಿತಿ ಕಠಿಣವಾಗಿದ್ದು, ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯಿದೆ. ಛಾಯಾಗ್ರಾಹಕರು ಛಾಯಾಗ್ರಹಣವನ್ನು ನಂಬಿ ಬದುಕುವ ಜೊತೆಗೆ ಸಹ ಉದ್ಯೋಗದ ಬಗ್ಗೆ ಚಿಂತಿಸಿ ಆರ್ಥಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಛಾಯಾಗ್ರಾಹಕ ಪ್ರಭಾಕರ ದೇವಾಡಿಗ ಮಾತನಾಡಿ, ಕಪ್ಪು ಬಿಳುಪಿನ ಕಾಲದಿಂದ ಕಲರ್ ಫುಲ್ ಯುಗದವರೆಗೂ ಫೋಟೋಗ್ರಫಿಗೆ ಮಾನ್ಯತೆಯಿದೆ. ತಾಳ್ಮೆಯ ವೃತ್ತಿ ಇದಾಗಿದೆ. ಇಂದು ಅಸಂಖ್ಯಾತ ಕಿರಿಯ ಛಾಯಾಗ್ರಾಹಕರು ಛಾಯಾಗ್ರಹಣ ಕ್ಷೇತ್ರಕ್ಕೆ ಬರುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ವಹಿಸಿದ್ದರು.
ಈ ಸಂದರ್ಭ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣ ರಾವ್, ಕಾಪು ವಲಯದ ಉಪಾಧ್ಯಕ್ಷರುಗಳಾದ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ಕಾಪು ವಲಯದ ಕಾರ್ಯದರ್ಶಿ ರಾಘವೇಂದ್ರ ಭಟ್,
ಕೋಶಾಧಿಕಾರಿ ಕಿರಣ್ ಕಾಪು, ಕಾಪು ವಲಯದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಉದಯ ಕುಮಾರ್ ಮತ್ತು ರಾಘವೇಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಸ್ವಾಗತಿಸಿದರು. ಉದಯ ಕುಮಾರ್ ನಿರೂಪಿಸಿದರು. ರಾಘವೇಂದ್ರ ಭಟ್ ವಂದಿಸಿದರು.
