ಸೆ.17 : ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದ ವ್ಯಕ್ತಿಯ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಉಡುಪಿ : ಸಮಾನತೆಯನ್ನು ಬೋಧಿಸಿ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂದು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳನ್ನು ನಂಬುವ ಕುಲದವರಿಂದಲೇ ನಾರಾಯಣಗುರುಗಳಿಗೆ ಮತ್ತು ಮಹಿಳೆಯೋರ್ವರಿಗೆ ಅವಮಾನವಾದ ಘಟನೆ ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿ ಸಭೆಯಲ್ಲಿ ನಡೆದಿದ್ದು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.
ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿ ಸಭೆಯಲ್ಲಿ ವ್ಯಕ್ತಿಯೋರ್ವ, ಬಿಲ್ಲವ ಸಮಾಜದ ಮಹಿಳೆಯ ಘನತೆಗೆ ಧಕ್ಕೆ ತಂದ ವಿಷಯಕ್ಕೆ ಸಂಬಂಧಿಸಿ ಹಿಂದಿನ ಅಧ್ಯಕ್ಷರ ಕ್ಷಮೆಯಾಚನೆಗೆ ಸಂಘದ ಅಧ್ಯಕ್ಷರು ಮುಂದಾದಲ್ಲಿ ಆಗಸ್ಟ್ 20 ರಂದು ನಡೆಯುವ ನಾರಾಯಣ ಗುರುಜಯಂತಿ ಆಚರಣೆಯ ಕಾರ್ಯಕ್ರಮಕ್ಕೆ ಹೆಜಮಾಡಿ ಬಿಲ್ಲವ ಮಹಿಳೆಯರು ಯಾರೂ ಬರುವುದಿಲ್ಲ ಎಂದು ಹೇಳುವ ಮೂಲಕ ನಾರಾಯಣ ಗುರುಗಳಿಗೆ ಅಗೌರವ ತೋರಿ, ಅಸಂಖ್ಯಾತ ಗುರುಗಳ ಅನುಯಾಯಿಗಳೂ ಸೇರಿದಂತೆ ಬಿಲ್ಲವ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಇದೀಗ ಬಿಲ್ಲವ ಸಮಾಜದ ಪ್ರಮುಖರು ಪ್ರಕರಣ ದಾಖಲು ಮಾಡಲು ಸಜ್ಜಾಗಿದ್ದಾರೆ.
ಈ ಬಗ್ಗೆ ಬಿಲ್ಲವ ಸಮಾಜದ ಸಂಘಟನೆಗಳಿಗೂ ಮನವಿ ನೀಡಲಾಗಿದೆ.
ಈಗಾಗಲೇ ಸಂತ್ರಸ್ತೆ ಉಡುಪಿ ಮಹಿಳಾ ಠಾಣೆಯಲ್ಲಿ 5 ಜನ ತಪ್ಪಿತಸ್ಥರ ವಿರುದ್ಧ ದೂರು ನೀಡಿ, ಅವಹೇಳನಗೈದ ವ್ಯಕ್ತಿಯನ್ನು ಹೊರತುಪಡಿಸಿ ಉಳಿದವರು ಕ್ಷಮೆಯಾಚಿಸಿರುತ್ತಾರೆ. ಆದರೆ ಒಣ ಪ್ರತಿಷ್ಠೆ, ದುಡ್ಡಿನ ಮದದಿಂದ ನಾನು ಯಾಕೆ ಕ್ಷಮೆ ಕೇಳಬೇಕು ನಾನು ದೊಡ್ಡ ಸಿ.ಎ ಎನ್ನುವ ಉದ್ಧಟನವನ್ನು ತೋರಿರುತ್ತಾರೆ. ಹಲವಾರು ಜನ ಇವರಿಗೆ ಬುದ್ಧಿ ಹೇಳಿದರು ಕ್ಯಾರೆ ಎನ್ನದೆ ನಾನು ಗುರುಗಳಿಗಿಂತ ದೊಡ್ಡವನು ಎನ್ನುವ ರೀತಿ ದುರ್ವರ್ತನೆ ತೋರಿರುತ್ತಾರೆ. ಸಾಕಷ್ಟು ಕಾಲಾವಕಾಶ ನೀಡಿದರು ಇನ್ನು ಗುರುಗಳಲ್ಲಿ ಕ್ಷಮೆ ಯಾಚಿಸಿಲ್ಲ ಎಂದರೆ ಇದು ದುರಂಕಾರದ ಪರಮವಾದಿ ಎಂದು ಗುರುಗಳ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸೆ. 17ರಂದು ಗುರುಗಳ ಅನುಯಾಯಿಗಳು, ಹಲವಾರು ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಆ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಲ್ಲವ ಹೋರಾಟಗಾರ ಕಿರಣ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
