ಅಕ್ಟೋಬರ್ 3 -12 : ವೈಭವದ ಉಡುಪಿ ಉಚ್ಚಿಲ ದಸರಾ - 2024
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷದ ಉಡುಪಿ ಉಚ್ಚಿಲ ದಸರಾ-2024ವನ್ನು ಅಕ್ಟೋಬರ್ 3 ರಿಂದ 12 ರ ತನಕ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಕ್ತರ ಸಹಕಾರದೊಂದಿಗೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು.
ಅವರು ಉಚ್ಚಿಲದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನವೆಂಬರ್ 02 ರ ಸಂಜೆ ಗಂಟೆ 6.30 ಪಡುಬಿದ್ರಿಯಿಂದ ಕಾಪು ಸಮುದ್ರತೀರದ ದೀಪಸ್ತಂಭದವರೆಗಿನ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಅಕ್ಟೋಬರ್ 3, ಗುರುವಾರ ಬೆಳಗ್ಗೆ ಗಂಟೆ 10ಕ್ಕೆ ಸರಿಯಾಗಿ ದಸರಾ ಉತ್ಸವದ ಉದ್ಘಾಟನೆಯು ಗಣ್ಯರು, ದಾನಿಗಳ, ಉಪಸ್ಥಿತಿಯಲ್ಲಿ ನಡೆಯಲಿದೆ.
ದಸರಾ ಪ್ರಯುಕ್ತ ಆಯೋಜಿಸಿರುವ ವಿವಿಧ ಮೇಳ, ಮಾಹಿತಿ ಶಿಬಿರ ಹಾಗೂ ವಸ್ತು ಪ್ರದರ್ಶನದ ಉದ್ಘಾಟನೆಯು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಬೆಳಿಗ್ಗೆ, ಗಂಟೆ 10.45 ಕ್ಕೆ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭ ಮಾಡಲಾಗುವುದು.
ಪ್ರತಿ ದಿನ ಚಂಡಿಕಾ ಹೋಮ, ಕಲ್ಪೋಕ್ತ ಪೂಜೆ, ಧಾರ್ಮಿಕ ಸಭೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸಹಿತ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮ ವಿವಿಧ ವೃತ್ತಿಪರ ತಂಡಗಳಿಂದ ಜಾದೂ ಕಾರ್ಯಕ್ರಮ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಜಾನಪದ ನೃತ್ಯ, ನೃತ್ಯ ರೂಪಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಕರಾವಳಿ ಜಿಲ್ಲೆಗಳ 40 ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಕ್ಷೇತ್ರದ ರಥಬೀದಿಯ ಸುತ್ತ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ ಸಹಿತ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
