ಕಾಪು : ಜಮೀಯತುಲ್ ಫಲಾಹ್ ಕಾಪು ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ
Thumbnail
ಕಾಪು : ಜಮೀಯತುಲ್ ಫಲಾಹ್ ಕಾಪು ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಶನಿವಾರ ಕಾಪುವಿನ ಕೆ1 ಹೊಟೇಲ್‌ನಲ್ಲಿ ನಡೆಯಿತು. ಕಾಪು ತಾಲ್ಲೂಕಿನ ಪ್ರತಿಭಾವ್ನಿತ 66 ವಿದ್ಯಾರ್ಥಿಗಳಿಗೆ ಒಟ್ಟು 2.64 ಲಕ್ಷ ರೂ. ಆರೋಗ್ಯ ಸಹಾಯಕ್ಕಾಗಿ 40 ಸಾವಿರ ರೂ. ಸೇರಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯವನ್ನು ಅರ್ಹರಿಗೆ ವಿತರಿಸಲಾಯಿತು. ಜಮೀಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ, ಮುಸ್ಲಿಮ್ ಸಮುದಾಯ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುತಿದ್ದು, ಜಮೀಯತುಲ್ ಫಲಾಹ್ ಇದಕ್ಕಾಗಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಶಭಿ ಅಹಮದ್ ಕಾಝಿ ಮಾತನಾಡಿ, ವಿದ್ಯಾರ್ಥಿಗಳು ಪಡೆದ ಈ ವಿದ್ಯಾರ್ಥಿವೇತನವನ್ನು ದುರುಪಯೋಗ ಮಾಡದೆ ಇದನ್ನು ಮುಂದಿನ ತಮ್ಮ ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂದು ಹೇಳಿದರು. ಹಲೀಮ ಸಾಬ್ಜು ಆಡಿಟೋರಿಂ ಆಡಳಿತ ನಿರ್ದೇಶಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಶುಭಹಾರೈಸಿದರು. ಉಪಾಧ್ಯಕ್ಷ ಮುಹಮ್ಮದ್ ಸಾಧಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಸ್ಮಾನ್ ಖಾನ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವನೆಗೈದರು. ಕೋಶಾಧಿಕಾರಿ ಶೇಖ್ ಸಾಬಿರ್ ಅಲಿ ವಂದಿಸಿದರು.
Additional image
30 Sep 2024, 01:43 PM
Category: Kaup
Tags: