ಉಚ್ಚಿಲ : ರಸ್ತೆ ದಾಟುವ ಸಂದರ್ಭ ಪತಿ-ಪತ್ನಿಗೆ ಬಸ್ ಡಿಕ್ಕಿ ; ಪತಿ ಮೃತ್ಯು, ಪತ್ನಿ ತೀವ್ರ ಗಾಯ
Thumbnail
ಉಚ್ಚಿಲ : ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಪತಿ-ಪತ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ತೀವ್ರವಾಗಿ ಗಾಯಗೊಂಡ ಘಟನೆ ಮೂಳೂರು ಮಿರ್ಚಿ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ. 9ರಂದು ರಾತ್ರಿ ನಡೆದಿದೆ. ಮೃತರನ್ನು ಕಾಪು ಭಾರತ್ ನಗರದ ನಿವಾಸಿ ಹಿದಾಯತ್ತುಲ್ಲಾ (55) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇವರ ಪತ್ನಿ ಸಾವರ್ ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಚ್ಚಿಲ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದ ಇವರು, ದಾರಿ ಮಧ್ಯೆ ಮೂಳೂರಿನಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಹೋಟೆಲಿಗೆ ಹೋಗಲು ಬೈಕನ್ನು ನಿಲ್ಲಿಸಿ ಪತ್ನಿ ಜೊತೆ ರಸ್ತೆ ದಾಟುತಿದ್ದ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು ಇವರಿಬ್ಬರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು ರಜೆಯಲ್ಲಿ ಊರಿಗೆ ಬಂದಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ಸೌದಿಗೆ ವಾಪಸ್ ಹೋಗುವವರಿದ್ದರು ಎಂದು ತಿಳಿದು ಬಂದಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
10 Oct 2024, 07:00 AM
Category: Kaup
Tags: