3ನೇ ವರ್ಷದ ಉಡುಪಿ ಉಚ್ಚಿಲ ದಸರಾ - 2024 ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ
ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶನಿವಾರ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ - 2024 ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಡ್ರೋನ್ ಪುಷ್ಪ ಸಿಂಚನ : ನವದುರ್ಗೆಯರ ಸಹಿತ ಶಾರದಾ ಮೂರ್ತಿಗೆ ಮಹಾಪೂಜೆಯ ಬಳಿಕ ವಿಶೇಷವಾಗಿ ಡ್ರೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪ
ಸಿಂಚನ ಮಾಡಲಾಯಿತು.
ಉಚ್ಚಿಲ ದೇವಳದಿಂದ ರಾಷ್ಟ್ರೀಯ
ಹೆದ್ದಾರಿ 66ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ ಎರ್ಮಾಳು ಮಸೀದಿವರೆಗೆ ಸಾಗಿ ಅಲ್ಲಿಂದ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿ, ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡಭಾಗದ ಬೀಚ್ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಲಿದೆ.
ಶೋಭಾಯಾತ್ರೆಯಲ್ಲಿ ಮೈಸೂರು ದಸರಾ ಅಂಬಾರಿ ಪ್ರತಿಕೃತಿಯು ಮುಂಭಾಗದಲ್ಲಿ ಸಾಗಿ, ಶ್ರೀ ಶಾರದಾದೇವಿ ಹಾಗೂ ನವದುರ್ಗೆಯರ ಟ್ಯಾಬ್ಲೊಗಳೊಂದಿಗೆ ತುಳು ನಾಡಿನ ಸಂಸ್ಕೃತಿ ಬಿಂಬಿಸುವ, ಮೀನುಗಾರಿಕೆಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ ವಿವಿಧ ಟ್ಯಾಬ್ಲೊಗಳು, ಕಲಾ ತಂಡ ಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸಹಸ್ರಾರು ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿತು.
ಗಂಗಾರತಿ, ಸುಡುಮದ್ದು : ಕಾಪು ಬೀಚ್ ಬಳಿ ಬೃಹತ್ ಗಂಗಾರತಿ, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾಪು ಬೀಚ್ ಬಳಿ ಸಮುದ್ರದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಜಲಸ್ತಂಭನಗೊಳಿಸಲಾಗುವುದು.
ಉಡುಪಿ ಉಚ್ಚಿಲ ದಸರಾ ರೂವಾರಿಯಾದ ನಾಡೋಜ ಡಾ.ಜಿ.ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿ ಆನಂದ್ ಸಿ ಕುಂದರ್ ಹಾಗೂ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ಸಿಪಿಐ ಜಯಶ್ರೀ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್., ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ನೇತೃತ್ವದಲ್ಲಿ ಸೂಕ್ತ ಭದ್ರತೆಯ ಜೊತೆಗೆ ಸಾವಿರಾರು ಸ್ವಯಂ ಸೇವಕರು ಶಿಸ್ತು ಪಾಲನೆಯಲ್ಲಿ ಸಹಕರಿಸಿದ್ದರು.
