ಕಾಪು : ವಾಲ್ಮೀಕಿಯವರ ಸಂದೇಶಗಳು ಬಾಳಿನ ಬೆಳಕು - ತಹಶಿಲ್ದಾರ್ ಡಾ. ಪ್ರತಿಭಾ ಆರ್
ಕಾಪು : ವಾಲ್ಮೀಕಿಯವರಂತೆ ಮನಃ ಪರಿವರ್ತನೆ ಮಾಡಿಕೊಂಡು ಸದ್ಗಗುಣವಂತರಾಗಲು ಎಲ್ಲರಿಗೂ ಸಾಧ್ಯವಿದೆ. ಜಗತ್ತಿನ ಪ್ರಥಮ ಕಾವ್ಯ ರಚನೆಕಾರರಾದ ವಾಲ್ಮೀಕಿಯವರ ಹಿರಿಮೆ ಎಂದೆಂದಿಗೂ ಪ್ರಾಥಃಸ್ಮರಣೀಯ ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಹೇಳಿದರು.
ಅವರು ಗುರುವಾರ ಕಾಪು ತಹಶಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂತಹ ಮಹಾನ್ ವ್ಯಕ್ತಿಯ ಜಯಂತಿ ಸಾರ್ಥಕತೆ ಹೊಂದಬೇಕಾದರೆ ಮಹರ್ಷಿಯವರು ರಾಮಾಯಣದ ಮೂಲಕ ನೀಡಿರುವ ಪಿತೃ ವಾಕ್ಯ ಪರಿಪಾಲನೆ, ಪಿತೃದೇವೋಭವ, ಮಮತೆ, ಸಮತೆ, ಭ್ರಾತೃತ್ವ ತ್ಯಾಗ ದೇಶಪ್ರೇಮ, ಅಳಿಲುಸೇವೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವ ಜನತೆಗೆ ಒಳ್ಳೆಯ ಹಾದಿಯಲ್ಲಿ ನಡೆಯಲು ಅದ್ಭುತ ಸಂದೇಶವನ್ನು ಮಹರ್ಷಿ ನೀಡಿದ್ದಾರೆ ಎಂದರು.
ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜು, ಉಪ ತಹಶಿಲ್ದಾರ್ ಗಳಾದ ರವಿಕಿರಣ್, ದೇವಕಿ, ಅಶೋಕ್ ಕೋಟೆಕಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
