ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ : 2025ರ ಏಪ್ರಿಲ್ 3 ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ
ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ದೇವಳದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಬುಧವಾರ ಸಂಜೆ ನಡೆದ ನಡೆದ ವಿಶೇಷ ಸಭೆಯಲ್ಲಿ 2025 ಏಪ್ರಿಲ್ 3ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ ಎಂದು ಗ್ರಾಮಸ್ಥರ ಸಮ್ಮುಖ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ, ದೇವಳ ಸಂಕೋಚಕ್ಕೆ ತಂತ್ರಿಗಳು ಪ್ರಶಸ್ತ ದಿನ ನೀಡಿದ್ದಾರೆ. 20 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ದೇಗುಲದ ಸಮಗ್ರ ಜೀರ್ಣೋದ್ಧಾರವಾಗಲಿದೆ. ದೇವಸ್ಥಾನದ ಗರ್ಭಗುಡಿಯ ಪುಣ್ಯಕಾರ್ಯವು ಗ್ರಾಮದ ಸಮಸ್ತ ಭಕ್ತಾದಿಗಳ ಆರ್ಥಿಕ ಸಹಕಾರದಿಂದ ನಡೆಯಲಿದೆ ಎಂದು ಹೇಳಿದರು.
ದೇವಳದ ತಂತ್ರಿವರ್ಯರಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಮಾತನಾಡಿ, ಮುಂದಿನ ಏಪ್ರಿಲ್ 3ರಂದು ಬಾಲಾಲಯ ಪ್ರತಿಷ್ಟೆ, ಸಂಕೋಚಕ್ಕೆ ದಿನ ನಿಗದಿ ಪಡಿಸಲಾಗಿದೆ. 2026 ಮೀನ ಸಂಕ್ರಮಣದೊಳಗಾಗಿ ನಡೆಯಬೇಕಾದ ಬ್ರಹ್ಮಕಲಶಾದಿಗಳ ಕಾರ್ಯ ನಡೆಸಬೇಕು ಎಂದು ಸಮಗ್ರವಾಗಿ ವಿವರಣೆ ನೀಡಿದರು.
ಗೌರವಾಧ್ಯಕ್ಷ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಶಕ್ತಿ ಮುಖ್ಯವಲ್ಲ ಭಕ್ತಿ ಮುಖ್ಯ. ಪಡುಬಿದ್ರಿಯ ದೇವಳದ ಜೀಣೋದ್ಧಾರಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ರಾಜೇಶ್ ಶೇರಿಗಾರ್, ವಿಶುಕುಮಾರ್ ಶೆಟ್ಟಿಬಾಲ್, ಕೇಶವ ಅಮೀನ್, ರವೀಂದ್ರನಾಥ ಜಿ. ಹೆಗ್ಡೆ, ವಿಷ್ಣುಮೂರ್ತಿ ಆಚಾರ್ಯ ಸಭೆಯಲ್ಲಿ ಮಾತನಾಡಿದರು.
ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ದೇವಳದ ಅರ್ಚಕರಾದ ಪದ್ಮನಾಭ ಭಟ್, ವೈ. ಗುರುರಾಜ ಭಟ್, ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಪ್ರಾಸ್ತಾವಿಸಿದರು. ಮುರಳೀನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯ ಶೆಟ್ಟಿ ಪದ್ರ ವಂದಿಸಿದರು.
