ನಾಪತ್ತೆಯಾದ ವ್ಯಕ್ತಿಯ ಮೃತದೇಹ ಎಲ್ಲೂರು ಇರಂದಾಡಿ ಹಾಡಿಯಲ್ಲಿ ಪತ್ತೆ
ಪಡುಬಿದ್ರಿ : ನಾಪತ್ತೆಯಾಗಿದ್ದ ಕಟಪಾಡಿ ನಿವಾಸಿಯೋರ್ವರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಎಲ್ಲೂರು ಗ್ರಾಮದ ಇರಂದಾಡಿಯ ಹಾಡಿಯೊಂದರಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದೆ.
ಹಾಡಿಯಲ್ಲಿ ತಲೆಬುರುಡೆ ಹಾಗೂ ಸೊಂಟದ ಭಾಗಗಳು ಇರುವುದರ ಬಗ್ಗೆ ಸ್ಥಳಿಯರು ಪೋಲಿಸರಿಗೆ ಕರೆಮಾಡಿ ತಿಳಿಸಿದ್ದು, ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸುನೀಲ್ ಕುಮಾರ್ (54) ಎಂಬುವವರ ಮೃತದೇಹದ ಇದಾಗಿದ್ದು,
ಘಟನಾ ಸ್ಥಳದಲ್ಲಿ ಒಂದು ತಲೆ ಬುರುಡೆ, ಸೊಂಟದ ಭಾಗ, ಕಪ್ಪು ಪ್ಯಾಂಟ್ ಮತ್ತು ಎದೆಯ ಭಾಗದಲ್ಲಿ ಟೀ-ಶರ್ಟ್ ಧರಿಸಿದ ರೀತಿಯಲ್ಲಿತ್ತು.
ಸುನಿಲ್ ಕುಮಾರ್ ಮನೆಯವರು ಶವದ ಮೈಮೇಲಿದ್ದ ಬಟ್ಟೆಗಳ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದಾರೆ. ಇವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಮನೆಗೂ ಬಾರದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯ ಯಶವಂತ್ ಶೆಟ್ಟಿಯವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳತ ಸ್ಥಿಯಲ್ಲಿದ್ದ ಮೃತದೇಹವನ್ನು ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ಆಂಬುಲೆನ್ಸ್ ಚಾಲಕ, ನಾಗರಾಜ್ ಎಚ್. ಕೆ.ರವರು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸುವಲ್ಲಿ ಸಹಕರಿಸಿದ್ದರು.
ಸುನಿಲ್ ಕುಮಾರ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
