ಬಲೆ ತುಲು ಲಿಪಿ ಕಲ್ಪುಗ - ತುಳು ಲಿಪಿ ಕಲಿಕಾ ಕಾರ್ಯಾಗಾರದ ಉದ್ಘಾಟನೆ
Thumbnail
ಉಡುಪಿ : ಜೈ ತುಲುನಾಡ್ (ರಿ.) ಉಡುಪಿ ಘಟಕ ಹಾಗೂ ಕೊಡವೂರು ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ (ರಿ.) ಕೊಡವೂರು ಇದರ ಜಂಟಿ ಆಶ್ರಯದಲ್ಲಿ 'ಬಲೆ ತುಲುಲಿಪಿ ಕಲ್ಪುಗ' ತುಳು ಲಿಪಿ ಕಲಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಡಾ| ಆಕಾಶರಾಜ್ ಜೈನ್ ಉದ್ಘಾಟಿಸಿ ಮಾತನಾಡಿ, ತುಳು ಭಾಷೆಯು ಸಾವಿರಾರು ವರ್ಷಗಳ ಇತಿಹಾಸವಿರುವಂತಹ ಭಾಷೆ. ಸಂಸ್ಥೆಯು ಇಲ್ಲಿಯವರೆಗೆ ಸುಮಾರು 30000ಕ್ಕಿಂತ ಹೆಚ್ಚು ಜನರಿಗೆ ತುಳು ಲಿಪಿಯನ್ನ ಉಚಿತವಾಗಿ ಕಲಿಸಲಾಗಿದೆ. ಈ ಕ್ರಾಂತಿ ಎಲ್ಲಿಯ ತನಕ ಮುಟ್ಟಿದೆ ಎಂದರೆ ಇಂದಿನ ರಾಜಕಾರಣಿಗಳು ಮತದಾನದ ಸಂದರ್ಭದಲ್ಲಿ ತುಳು ಶಾಲು ಧರಿಸಿ, ತುಳು ಲಿಪಿಯನ್ನ ಪ್ರಚಾರದಲ್ಲಿ ಬಳಸಿ ತುಳುಭಾಷೆಯಲ್ಲಿಯೇ ಮತ ಯಾಚಿಸುವಂತಾಗಿದೆ. ಇದಕ್ಕೆ ಮೂಲ ಕಾರಣ ಜೈತುಲುನಾಡ್(ರಿ.) ಸಂಸ್ಥೆಯ ಉತ್ಸಾಹಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದಂತಹ ಮಹತ್ತರ ಬದಲಾವಣೆ. ಮುಂದೊಂದು ದಿನ ತುಳುನಾಡಿನ ಜನರೇ ನಿಮಗೆ ಮಾತೃಭಾಷೆ ತುಳುಲಿಪಿಯ ಬಗ್ಗೆ ತಿಳಿದಿಲ್ಲವೇ ಎಂದು ತಮ್ಮವರಲ್ಲಿ ಕೇಳುವ ಕಾಲ ಬರಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಮಾತನಾಡಿ, ಜೈ ತುಲುನಾಡ್ (ರಿ.) ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ತುಳು ಲಿಪಿಯನ್ನು ತುಳುನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಶಿಕ್ಷಣ ಕ್ರಾಂತಿಯನ್ನೇ ಪ್ರಾರಂಭಿಸಿದ್ದಾರೆ. ಅವರ ಸಹಕಾರದಿಂದ ಇಂದು ಎರಡನೇ ಬಾರಿಗೆ ತುಳು ಲಿಪಿ ಕಲಿಕಾ ತರಬೇತಿ ಕಾರ್ಯಾಗಾರವನ್ನು ಈ ಶಾಲೆಯಲ್ಲಿ ನಡೆಸುವಂತಾಯಿತು. ಅವರ ಈ ಕಾರ್ಯಕ್ಕೆ ಚಿರರುಣಿಯಾಗಿದ್ದೇನೆ ಹಾಗೂ ತುಳುವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ತುಳು ಭಾಷೆಯಲ್ಲಿ ಮಾತನಾಡಿಕೊಂಡು ತಮ್ಮವರನ್ನ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಇದು ಅವರ ಮಣ್ಣಿನ ಗುಣ ಎಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದಂತಹ ಜೈ ತುಲುನಾಡ್ (ರಿ.) ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಪೂಂಜಾ ತಾರಿಪಾಡಿಗುತ್ತು ತುಳುಲಿಪಿ ಕಲಿಕೆಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಲುನಾಡ್ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಸುಶೀಲಾ ಜಯಕರ್ ಕೊಡವೂರು ವಹಿಸಿದ್ದರು. ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ರಾಧಾಕೃಷ್ಣ ಪೈ, ಶಂಕರನಾರಾಯಣ ಪ್ರತಿಷ್ಠಾನ (ರಿ) ಕೊಡವೂರು ಇದರ ಅಧ್ಯಕ್ಷರಾದ ಟಿ. ರಾಘವೇಂದ್ರ ರಾವ್, ಸುಮನಸಾ ಕೊಡವೂರು (ರಿ.)ಇದರ ಅಧ್ಯಕ್ಷರಾದ ಪ್ರಕಾಶ್.ಜಿ ಕೊಡವೂರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಕೊಡವೂರು, ಯುವಕ ಸಂಘ (ರಿ.) ಕೊಡವೂರು ಇದರ ಅಧ್ಯಕ್ಷರಾದ ದೀಪಕ್ ಕೊಡವೂರು, ಹಳೆ ವಿದ್ಯಾರ್ಥಿ, ಯುವಕ ಸಂಘದ ಕ್ರೀಡಾ ಕಾರ್ಯದರ್ಶಿ ಅಶೋಕ್ ಶೆಟ್ಟಿಗಾರ್, ತುಳುಲಿಪಿ ಶಿಕ್ಷಕರಾದ ಸ್ವಾತಿ ಸುವರ್ಣ, ಜೈ ತುಲುನಾಡ್ (ರಿ.) ಮಂಗಳೂರು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶರತ್ ರಾಜ್, ಉಡುಪಿ ಘಟಕದ ಉಪಾಧ್ಯಕ್ಷರಾದ ಕಿರಣ್ ಒಡಿಪು, ಕೋಶಾಧಿಕಾರಿಯಾದ ಸುಪ್ರೀತಾ ಕೊಡವೂರು, ಉಡುಪಿ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂಗೀತ ಮಣಿಪಾಲ್, ಸದಸ್ಯರಾದ ಯೋಗಿನಿ ಬೈಲೂರು ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಸಂತೋಷ್ ಎನ್.ಎಸ್ ಸ್ವಾಗತಿಸಿದರು. ಜೈ ತುಲುನಾಡ್ (ರಿ.) ಉಡುಪಿ ಘಟಕದ ಕಾರ್ಯದರ್ಶಿಯಾದ ಸಾಗರ್ ಬನ್ನಂಜೆ ಪ್ರಸ್ತಾವನೆಗೈದರು. ಜೈ ತುಲುನಾಡ್(ರಿ.) ಉಡುಪಿ ಘಟಕದ ಸದಸ್ಯರಾದ ಶಿಲ್ಪಾ ಕೇಶವ್ ಕೊಡವೂರು ಕಾರ್ಯಕ್ರಮವನ್ನ ನಿರೂಪಿಸಿದರು. ಜೈ ತುಲುನಾಡ್ (ರಿ) ಇದರ ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕೊಡವೂರು ವಂದಿಸಿದರು.
Additional image Additional image
12 Nov 2024, 10:53 AM
Category: Kaup
Tags: