ಹಿರಿಯರೆಡೆಗೆ ಸಾಹಿತ್ಯದ ನಡಿಗೆ : ಸಾಂತೂರು ವಿಠ್ಠಲ ಜೋಯಿಸರಿಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ
ಪಡುಬಿದ್ರಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಮಾಸಾಚರಣೆ "ತಿಂಗಳ ಸಡಗರ -2024" ಅಂಗವಾಗಿ ಸೋಮವಾರ 92ರ ಹರೆಯದ ನಿವೃತ್ತ ಶಿಕ್ಷಕರು, ಪ್ರತಿಪರ ಕೃಷಿಕರು, ಹಿರಿಯ ವಿದ್ವಾಂಸರು, ಗ್ರಾಮದೊಡೆಯ ಶ್ರೀಸುಬ್ರಹ್ಮಣ್ಯನ ಪರಮ ಆರಾಧಕರಾದ ವೇದಮೂರ್ತಿ ಶ್ರೀ ವಿಠ್ಠಲ ಜೋಯಿಸರಿಗೆ ಸಾಂತೂರು ಇವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ನೇತೃತ್ವದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ವಿಶೇಷ ಕಾರ್ಯಕ್ರಮದಡಿಯಲ್ಲಿ ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ತೋಕೂರು ಇಲ್ಲಿನ ಪ್ರಾಂಶುಪಾಲ ಹರಿ ಎಚ್ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವ, ತಪಸ್ಸಿಗೆ ತಕ್ಕ ಜೀವನ, ಉತ್ತಮ ಪಾಂಡಿತ್ಯವನ್ನು ಹೊಂದಿದ ಕನ್ನಡವನ್ನು ಪೋಷಿಸಿ ಬೆಳೆಸಿದ ಮಹಾನ್ ವಿದ್ವಾಂಸರಾದ ವಿಠ್ಠಲ ಜೋಯಿಸರವರನ್ನು ಅವರ ನಿವಾಸದಲ್ಲಿಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾರ್ಪಣೆ ಮಾಡುತ್ತಿರುವುದು ತೀವ್ರ ಆನಂದವನ್ನು ತಂದಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಜಿಲ್ಲೆಯಲ್ಲಿ ಈವರೆಗೆ ಇಂತಹ 144 ಕಡೆಗಳಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಪ್ರತೀ ಒಬ್ಬರೂ ಕನ್ನಡ ನಾಡು, ನುಡಿ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಬಹು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ಮಹಾನ್ ಸಾಧಕರ ಜೀವನದ ಸಂಕ್ಷಿಪ್ತ ಮಾಹಿತಿಯನ್ನು ದಾಖಲಿಸಿ ಪುಸ್ತಕ ರೂಪದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಮಾಡಲಿದೆ ಎಂದರು.
ಗೌರವ ಸ್ವೀಕರಿಸಿದ ವೇದಮೂರ್ತಿ ಶ್ರೀವಿಠ್ಠಲ ಜೋಯಿಸರು ಮಾತನಾಡಿ ತಮ್ಮ ಜೀವನದ ಹೆಜ್ಜೆಗುರುತುಗಳನ್ನು ಸ್ಮರಿಸಿ ನೆರೆದ ಶಿಷ್ಯ ವರ್ಗ ಹಾಗೂ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗಿರೀಶ್ ಪಲಿಮಾರು, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ರಾಘವೇಂದ್ರ ಭಟ್, ವಿದ್ವಾಂಸರಾದ ಪದ್ಮನಾಭ ಭಟ್, ರಘುಪತಿ ಭಟ್ ಮಾತನಾಡಿದರು.
ವೇದಿಕೆಯಲ್ಲಿ ಉದ್ಯಮಿ ರವೀಶ್ ಶೆಟ್ಟಿ ಪಿಲಾರು ಹೊಸಮನೆ, ಸಾನದಮನೆ ಗುಣಕರ ಪೂಜಾರಿ, ಮುದರಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ರವೀಂದ್ರ ಪ್ರಭು, ಗ್ರಾ.ಪಂ.ಸದಸ್ಯರುಗಳಾದ ಬಾಲಚಂದ್ರ ಶೆಟ್ಟಿ, ಶಿವರಾಮ ಭಂಡಾರಿ, ಯಶೋದಾ ಪೂಜಾರಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಮನೋಹರ ಪಿ. ಸದಸ್ಯರಾದ ನರಸಿಂಹಮೂರ್ತಿ, ಮುಡಾಡಿ ಮನೆ ಶುಭಕರ ಶೆಟ್ಟಿ, ಉದ್ಯಮಿ ಪ್ರಕಾಶ್ ಶೆಟ್ಟಿ ಸಾಂತೂರು,ಸುಬ್ರಹ್ಮಣ್ಯ ಭಟ್, ಪದ್ಮನಾಭ ಜೋಯಿಸ, ಪರಶುರಾಮ್ ಉಪಸ್ಥಿತರಿದ್ದರು.
ಸ್ವಾತಿ, ರಾಜಶ್ರೀ, ಪ್ರೇರಣಾ ಪ್ರಾರ್ಥಿಸಿದರು. ಪಲಿಮಾರು ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಪರಿಷತ್ತು ತಾಲೂಕು ಘಟಕದ ಸದಸ್ಯ ಪಿಲಾರು ಸುಧಾಕರ ಶೆಣೈ ಪ್ರಾಸ್ತಾವನೆಗೈದರು. ಸದಸ್ಯ ದೇವದಾಸ್ ಪಾಟ್ಕರ್ ಮುದರಂಗಡಿ ಸನ್ಮಾನಪತ್ರ ವಾಚಿಸಿದರು. ಬಿ.ರಾಮಕೃಷ್ಣ ಭಟ್ ನಿರೂಪಿಸಿದರು. ಕಸಾಪ ತಾಲೂಕು ಘಟಕದ ಗೌ.ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.
