ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಈಶಾನ್ಯ ರಾಜ್ಯಗಳ ಪ್ರವಾಸ ಮುಗಿಸಿದ ಕಾಪುವಿನ ಯುವಕರಿಗೆ ಕಾಪು ಹೊಸ ಮಾರಿಗುಡಿಯಲ್ಲಿ ಅಭಿನಂದನೆ New

Posted On: 28-11-2024 10:34AM

ಕಾಪು : ಶಟರ್ ಬಾಕ್ಸ್ ಖ್ಯಾತಿಯ ಯೂ ಟ್ಯೂಬರ್ ಕಾಪುವಿನ ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ತಂಡ ಕರಾವಳಿಯ ಪ್ರವಾಸೋದ್ಯಮ, ಧಾರ್ಮಿಕ ಮತ್ತು ವಿಶೇಷವಾಗಿ ಉತ್ತರ ಭಾರತದ ಮೇಘಾಲಯ, ಮಿಝೋರಾಂ, ಒಡಿಶಾ ಸಹಿತ 7 ರಾಜ್ಯಗಳ ಪ್ರವಾಸ ಕೈಗೊಂಡು ಕಲೆ ಸಂಸ್ಕೃತಿ ಆಹಾರದ ಅಧ್ಯಯನ ನಡೆಸಿ ಪರಂಪರೆಯನ್ನು ಎಲ್ಲೆಡೆ ಪ್ರಚುರಗೊಳಿಸುವ ಉದ್ದೇಶದೊಂದಿಗೆ ಸುಜುಕಿ ಜಿಮ್ಮಿ ವಾಹನದಲ್ಲಿ ಈಶಾನ್ಯ ರಾಜ್ಯಗಳಿಗೆ ಕಳೆದ ಅ.5ರಂದು ಪ್ರವಾಸ ಹೊರಟಿದ್ದು, ಬುಧವಾರ 53 ದಿನಗಳ ಪ್ರವಾಸ ಮುಗಿಸಿ ಕಾಪುವಿಗೆ ಆಗಮಿಸಿದ್ದರು.

ಕಾಪುವಿಗೆ ಆಗಮಿಸಿದ ಸಚಿನ್ ಶೆಟ್ಟಿ ಮತ್ತು ಅವರ ತಂಡವನ್ನು ಕಾಪು ಹೊಸ ಮಾರಿಗುಡಿ ದೇಗುಲದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ಶ್ರೀ ದೇವಿಗೆ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿದರು.

ಇದೇ ಸಂದರ್ಭ ಆಡಳಿತ ಮಂಡಳಿಯ ವತಿಯಿಂದ ಸಚಿನ್ ಮತ್ತು ತಂಡವನ್ನು ಸನ್ಮಾನಿಸಲಾಯಿತು. ಮಾಧ್ಯಮದೊಂದಿಗೆ ಸಚಿನ್ ಶೆಟ್ಟಿ ಮಾತನಾಡಿ, ನಾವು ಅಕ್ಟೋಬರ್ 5ರಂದು ಕಾಪು ಶ್ರೀ ಹೊಸಮಾರಿ ಗುಡಿಯಿಂದ ಕರ್ನಾಟಕ, ಆಂಧ್ಯಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರ, ಮಿಝೊರಾಮ್, ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಿ ಈಶಾನ್ಯ ರಾಜ್ಯಗಳ ಅಧ್ಯಯನ ಪ್ರವಾಸ ಮಾಡಿ 53 ದಿನಗಳ ನಂತರ ಕಾಪುವಿಗೆ ಆಗಮಿಸಿದ್ದೇವೆ. ನಾವು ಪ್ರವಾಸದ ವೇಳೆ ವಿಡಿಯೋ ತುಣುಕನ್ನು ನನ್ನ ಶಟರ್ಬಾಕ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡುವ ಮೂಲಕ ಜನರಿಗೆ ವಿವಿಧ ರಾಜ್ಯಗಳ ಮಾಹಿತಿ ನೀಡಿದ್ದೇನೆ. ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರದ ಬಗ್ಗೆ, ನವದುರ್ಗಾ ಲೇಖನ ಯಜ್ಞದ ಬಗ್ಗೆ ಎಲ್ಲಾ ಕಡೆ ಮಾಹಿತಿ ನೀಡಿದ್ದೇನೆ. ನಮ್ಮ ತಂಡದಲ್ಲಿ ಅಭಿಷೇಕ್, ಸಾಯಿ ಸಹಿತ ನಾಲ್ವರೊಂದಿಗೆ ಪ್ರವಾಸ ಕೈಗೊಂಡಿದ್ದೆವು. ನಮ್ಮ ಪ್ರವಾಸಕ್ಕೆ 8 ಜನರು ಪ್ರಾಯೋಜಕತ್ವ ನೀಡಿದ್ದರು ಎಂದೂ ಸಚಿನ್ ಶೆಟ್ಟಿ ಹೇಳಿದರು.

ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಮಾಧವ ಆರ್ ಪಾಲನ್, ನವದುರ್ಗ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.